ದ್ವಿಚಕ್ರ ಸವಾರ ಬಲಿ: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಒತ್ತಾಯ
ಸುರತ್ಕಲ್ : ಮಂಗಳೂರು - ಬಿಸಿ ರೋಡ್ ರಾಷ್ಟ್ರೀಯ ಹೆದ್ದಾರಿಯ ಪಣಂಬೂರು ಸಮೀಪ ರಸ್ತೆ ನಡುವೆ ಹೊಂಡ ತಪ್ಪಿಸಲು ಯತ್ನಿಸಿದ ದ್ವಿಚಕ್ರ ವಾಹನ ಸವಾರ ರಸ್ತೆಗೆ ಉರುಳಿ ಬಿದ್ದು ಹಿಂಬದಿಯ ಘನವಾಹನದಡಿ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಬೇಜವಾಬ್ದಾರಿತನ, ಕರ್ತವ್ಯಲೋಪವೇ ನೇರ ಕಾರಣವಾಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು, ಅಪಘಾತಕ್ಕೆ ಬಲಿಯಾದ ಸವಾರನ ಕುಟುಂಬಕ್ಕೆ ಹೆದ್ದಾರಿ ಪ್ರಾಧಿಕಾರ ಪರಿಹಾರ ಧನ ಒದಗಿಸಬೇಕು ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.
ಬಿಸಿರೋಡ್- ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ಟೋಲ್ ಸಂಗ್ರಹದ ರಸ್ತೆಯಾಗಿದ್ದು ಬಿಸಿರೋಡ್ ನಲ್ಲಿ ಈಗಲೂ ಟೋಲ್ ಸಂಗ್ರಹ ನಡೆಯುತ್ತಿದೆ. ಹೆದ್ದಾರಿ ಪ್ರಾಧಿಕಾರವು ಇರ್ಕಾನ್ ಮೂಲಕ ನಿರ್ಮಿಸಿದ ಈ ಹೆದ್ದಾರಿ ನಿರ್ಮಾಣವೇ ತೀರಾ ಕಳಪೆಯಾಗಿದ್ದು, ಪ್ರತಿವರ್ಷ ಮಳೆಗಾಲದ ಆರಂಭದಲ್ಲೇ ಬೃಹತ್ ಹೊಂಡಗಳು ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದ ಅಪಘಾತಗಳು ನಡೆದು ಹತ್ತಾರು ಸಂಖ್ಯೆಯ ಸಾವುನೋವುಗಳು ಸಂಭವಿಸಿವೆ. ಪ್ರತಿಬಾರಿಯೂ ಪ್ರತಿಭಟನೆ, ಹೋರಾಟಗಳನ್ನು ನಡೆಸಿಯೇ ಹೊಂಡ ಮುಚ್ಚಿಸಬೇಕಾದ ಅನಿವಾರ್ಯ ಸ್ಥಿತಿ ಇಲ್ಲಿದೆ. ಮಳೆಗಾಲದ ಮೂರ್ನಾಲ್ಕು ತಿಂಗಳು ಈ ರಸ್ತೆಯ ಪ್ರಯಾಣ ಮೃತ್ಯುವಿನಡೆಗೆ ಸರಸ ಎಂಬಂತಾಗಿದೆ ಎಂದು ಆರೋಪಿಸಿದೆ.
ವರ್ಷಕ್ಕೆ ಹತ್ತಾರು ಕೋಟಿ ರೂಪಾಯಿ ಈ ರಸ್ತೆಯ ನಿರ್ವಹಣೆಗಾಗಿ ಹೆದ್ದಾರಿ ಪ್ರಾಧಿಕಾರ ಮೀಸಲಿಡುತ್ತದೆ. ಆದರೆ ಗುಣಮಟ್ಟದ ನಿರ್ವಹಣೆ, ಮಳೆಗಾಲಕ್ಕೆ ಮುಂಚಿತವಾಗಿ ದುರಸ್ಥಿಗಳು ನಡೆಯುವುದೇ ಇಲ್ಲ. ಈ ನಿಧಿಯು ಬಹುತೇಕ ಭ್ರಷ್ಟಾಚಾರದ ಪಾಲಾಗುತ್ತಿದೆ. ಈ ಭಾಗದ ಸಂಸದ, ಶಾಸಕರ ಬೇಜವಾಬ್ದಾರಿತನ, ಅರಿವಿನ ಕೊರತೆ, ಜನಾಗ್ರಹವನ್ನು ಲೆಕ್ಕಿಸದ ದರ್ಪದ ನಡೆಗಳು ರಾಷ್ಟ್ರೀಯ ಹೆದ್ದಾರಿಯ ಇಂತಹ ದುಸ್ಥಿತಿಗೆ ಕಾರಣವಾಗಿದೆ ಎಂದು ಸಮಿತಿ ಹೇಳಿದೆ.
ಈ ಬಾರಿಯ ಮೊದಲ ಮಳೆಗೆ ನೂರಾರು ಸಂಖ್ಯೆಯಲ್ಲಿ ಹೊಂಡಗಳು ಬಿದ್ದಿರುವ ಕುರಿತು ಸಂಬಂಧ ಪಟ್ಟವರ ಗಮನ ಸೆಳೆದು, ಉಂಟಾಗುವ ಅಪಾಯ ಗಳ ಬಗ್ಗೆ ಎಚ್ಚರಿಸಿದ್ದರೂ ಪ್ರಾಧಿಕಾರದ ಅಧಿಕಾರಿಗಳು ತೀರಾ ಬೇಜವಾಬ್ದಾರಿತನ ತೋರಿರುತ್ತಾರೆ. ಕಳೆದ ಹದಿನೈದು ದಿನಗಳಿಂದ ಸರಣಿ ಅಪಘಾತ ಗಳು ನಡೆಯುತ್ತಿದ್ದರೂ ಯಾವುದೇ ತುರ್ತು ಕ್ರಮಗಳನ್ನು ಕೈಗೊಂಡಿಲ್ಲ. ಇಂದು ಅಪಾಘಾತಕ್ಕೆ ಸವಾರ ಬಲಿಯಾದ ನಂತರ ಬೈಕ್ ಉರುಳಿದ ಹೊಂಡಕ್ಕೆ ತೇಪೆಹಾಕಿ ಜನರ ಕಣ್ಣಿಗೆ ಮಣ್ಣೆರೆಚುವ ಯತ್ನ ನಡೆಸಿರುತ್ತಾರೆ. ಇಂದಿನ ಅಪಘಾತ, ಸವಾರನ ಸಾವಿಗೆ ಹೆದ್ದಾರಿ ಪ್ರಾಧಿಕಾರದ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಬಲಿಯಾದ ದ್ವಿಚಕ್ರ ಸವಾರನ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಬಿಸಿ ರೋಡ್- ಸುರತ್ಕಲ್ ಹೆದ್ದಾರಿಯ ಎಲ್ಲಾ ಗುಂಡಿಗಳನ್ನು ಗುಣಮಟ್ಟದ ಕಾಮಗಾರಿಯ ಮೂಲಕ ತಕ್ಷಣ ಮುಚ್ಚಬೇಕು ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ. ಇಲ್ಲದಿದ್ದಲ್ಲಿ ಹೆದ್ದಾರಿ ಪ್ರಾಧಿಕಾರದ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.