ಉಜಿರೆ | ಸರಕಾರಿ ಶಾಲೆಯ ಛಾವಣಿ ಕುಸಿತ: ತಪ್ಪಿದ ದುರಂತ
ಬೆಳ್ತಂಗಡಿ: ಸರಕಾರಿ ಶಾಲಾ ಕಟ್ಟಡವೊಂದರ ಛಾವಣಿ ಕುಸಿದು ಬಿದ್ದ ಘಟನೆ ಉಜಿರೆ ಗ್ರಾಮದ ಹಳೇ ಪೇಟೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಇಲ್ಲಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಛಾವಣಿಯ ಒಂದು ಪಾರ್ಶ್ವ ಕಳೆದ ರಾತ್ರಿ ಕುಸಿದು ಬಿದ್ದಿದೆ.
ಈ ಶಾಲೆಯ ಹಳೆಯ ಹಂಚಿನ ಮೇಲ್ಛಾವಣಿ ಸಭಾ ಭವನವು ಕಳೆದ ಹಲವು ಸಮಯಗಳಿಂದ ಬೀಳುವ ಸ್ಥಿತಿಯಲ್ಲಿ ಇತ್ತು. ಸಂಬಂಧಪಟ್ಟವರಿಗೆ ದುರಸ್ತಿಗಾಗಿ ತಿಳಿಸಿದರೂ, ಈ ಬಗ್ಗೆ ಗಮನಹರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಪ್ರಸಕ್ತ ಕಟ್ಟಡದ ಒಂದು ಪಾರ್ಶ್ವದ ಛಾವಣಿ ಕುಸಿದಿದ್ದು, ಉಳಿದ ಭಾಗ ಶಿಥಿಲ ಪಕ್ಕಾಸೊಂದರ ಆಧಾರದಲ್ಲಿ ನಿಂತಿದೆ. ಈ ಪಕ್ಕಾಸು ಮುರಿದರೆ ಛಾವಣಿಯ ಹೆಚ್ಚಿನ ಭಾಗ ಕುಸಿದು ಬೀಳುವ ಸಾಧ್ಯತೆ ಇದೆ. ರಾತ್ರಿ ವೇಳೆ ಈ ಘಟನೆ ಸಂಭವಿಸಿದ್ದರಿಂದ ಯಾವುದೇ ಅಪಾಯ ಉಂಟಾಗಿಲ್ಲ.
ಒಂದರಿಂದ ಏಳನೇ ತರಗತಿವರೆಗೆ 123 ವಿದ್ಯಾರ್ಥಿಗಳು ಈ ಶಾಲೆಯಲ್ಲಿದ್ದು, ಛಾವಣಿ ಕುಸಿತವಾದ ಕಟ್ಟಡದಲ್ಲೂ ಕೆಲವು ಸಲ ಪಾಠ ಪ್ರವಚನಗಳು ನಡೆಯುತ್ತಿದ್ದವು. ಶಾಲೆಯ ಈ ಕಟ್ಟಡ 44 ವರ್ಷ ಹಳೆಯದಾಗಿದ್ದು, ದುರಸ್ತಿ ಬಗ್ಗೆ ಜನಪ್ರತಿನಿಧಿಗಳು, ಇಲಾಖೆಗೂ ಮನವಿ ಸಲ್ಲಿಸಲಾಗಿತ್ತು ಎಂದು ಶಾಲಾಭಿವೃದ್ಧಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ಖಾದರ್ ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಕಟ್ಟಡದ ದುರಸ್ತಿಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಒ ವಿರೂಪಾಕ್ಷಪ್ಪ ತಿಳಿಸಿದ್ದಾರೆ.