ಉಳಾಯಿಬೆಟ್ಟು: ಮರಳು ಅಕ್ರಮ ಸಾಗಾಟ ಆರೋಪ; 10 ಟಿಪ್ಪರ್, ಜೆಸಿಬಿ ವಶಕ್ಕೆ
ಸಾಂದರ್ಭಿಕ ಚಿತ್ರ
ಮಂಗಳೂರು, ಆ. 19: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟು ಬಳಿ ಪಲ್ಗುಣಿ ನದಿತೀರದಲ್ಲಿ ಮರಳನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದ ಮತ್ತು ಸಾಗಾಟ ಮಾಡುತ್ತಿದ್ದ ಜಾಲವನ್ನು ಶನಿವಾರ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ಎನ್. ನಾಯಕ್ ನೇತೃತ್ವದ ಪೊಲೀಸ್ ತಂಡ ಪತ್ತೆ ಹಚ್ಚಿದೆ.
ಮರಳು ಸಾಗಾಟಕ್ಕೆ ಬಳಸಿದ್ದ 10 ಟಿಪ್ಪರ್, ಡೋಜರ್ ಮತ್ತು ಜೆಸಿಬಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಉಳಾಯಿಬೆಟ್ಟು ಎಂಬಲ್ಲಿನ ಇಡ್ಯಾದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಗ್ರಾಪಂ ಅಧಿಕಾರಿಗಳು ದಾಳಿ ನಡೆಸಿದರು. ಸರಕಾರಿ ಇಲಾಖೆಯ ವಾಹನವನ್ನು ಗಮನಿಸಿದ ಲಾರಿಗಳಲ್ಲಿದ್ದ ಚಾಲಕರು ಮತ್ತು ಕಾರ್ಮಿಕರು ಪಕ್ಕದ ತೋಟದ ಮೂಲಕ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಡೋಜರ್ ಮತ್ತು ಜೆಸಿಬಿ ಮೂಲಕ ಮರಳು ತುಂಬಿಸಿದ್ದ ಎರಡು ಟಿಪ್ಪರ್ ಲಾರಿ ಮತ್ತು ಎಂಟು ಖಾಲಿ ಟಿಪ್ಪರ್ಗಳು, ಒಂದು ಜೆಸಿಬಿ, 1ಡೋಜರ್ ಮತ್ತು ದಾಸ್ತನು ಇರಿಸಲಾಗಿದ್ದ ಮರಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.