ʼಉಳ್ಳಾಲ ನಾಗರಿಕ ವೇದಿಕೆʼಯ ಲಾಂಛನ ಬಿಡುಗಡೆ ಕಾರ್ಯಕ್ರಮ
ಉಳ್ಳಾಲ: ಉಳ್ಳಾಲ ನಾಗರಿಕ ವೇದಿಕೆಯ ಲಾಂಛನ ಬಿಡುಗಡೆ ಸಮಾರಂಭ ಮಾಸ್ತಿಕಟ್ಟೆ ಯಲ್ಲಿರುವ ಅದಮ್ಯ ಚೇತನ ವಿಶೇಷ ಮಕ್ಕಳ ಹಗಲು ಪಾಲನಾ ಕೇಂದ್ರದಲ್ಲಿ ರವಿವಾರ ನಡೆಯಿತು.
ಉಳ್ಳಾಲ ನಾಗರಿಕ ವೇದಿಕೆ, ಸುಸ್ಥಿರ ಉಳ್ಳಾಲ ಕನಸುಗಾರರ ಬಳಗ ಉಳ್ಳಾಲ ಮತ್ತು ರೋಶನಿ ಹಳೇವಿದ್ಯಾರ್ಥಿ ಸಂಘ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ನಾಗರಿಕ ವೇದಿಕೆಯ ಅಧ್ಯಕ್ಷ ಸಾಗರ್ ಖಾಲಿದ್ ವಹಿಸಿದ್ದರು. ರೋಶನಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಿಸ್ ಇವಲಿನ್ ಬೆನಿಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಉಳ್ಳಾಲ ಇನ್ಸ್ಪೆಕ್ಟರ್ ಬಾಲಕೃಷ್ಣ ಅವರು, ನಮ್ಮೂರನ್ನು ಸೌಹಾರ್ದತೆ ಯ ನೆಲೆಯಾಗಿ ನಿರ್ಮಾಣ ಮಾಡಲು ಎಲ್ಲರೂ ಶ್ರಮ ವಹಿಸಬೇಕು. ಜಾತಿ, ಮತ, ಪಂಥ ಬಿಟ್ಟು ಎಲ್ಲರೂ ಏಕತೆಯಿಂದ ಸಂಘಟನಾತ್ಮಕವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಇದು ಸಾಧ್ಯ ಎಂದು ಹೇಳಿದರು.
ಉಳ್ಳಾಲ ನಾಗರಿಕ ವೇದಿಕೆಯ ಸಂಚಾಲಕ ಝಾಕಿರ್ ಇಕ್ಲಾಸ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಕು.ತನುಜಾ ಅವರು ಬರೆದ ʼಉಳ್ಳಾಲದ ಬದಲಾವಣೆಯ ಹರಿಕಾರರುʼ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು.
ಪ್ರಸ್ತುತ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಉಡುಪಿ ನಗರ ಸಭೆ ಪೌರಾಯುಕ್ತ ರಾಯಪ್ಪ, ಉಳ್ಳಾಲ ದರ್ಗಾದ ಮಾಜಿ ಅಧ್ಯಕ್ಷ ಅಬ್ದುಲ್ ರಶೀದ್, ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಕೆ.ಎಂ.ಕೆ ಮಂಜನಾಡಿ, ಜಾನಕಿ ಪುತ್ರನ್, ವಾಸುದೇವ ರಾವ್, ಸುಂದರ ಉಳಿಯ, ಪ್ರೀತಂ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಮಕ್ಕಳ ಸಾಹಿತ್ಯ ಪರಿಷತ್ ಉಳ್ಳಾಲ ಅಧ್ಯಕ್ಷ ಸಿಹಾನ್ ಬಿ.ಎಂ., ಸುಸ್ಥಿರ ಉಳ್ಲಾಲ ಕನಸು ಗಾರರ ಬಳಗದ ಸಂಚಾಲಕ ಕಿಶೋರ್ ಅತ್ತಾವರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ದಲ್ಲಿ ನಗರ ಸಭೆ ಕೌನ್ಸಿಲರ್ ಜಬ್ಬಾರ್, ಯೂತ್ ಸ್ಪೋರ್ಟ್ಸ್ ಅಕಾಡೆಮಿ ನಿರ್ದೇಶಕ ಸಾಜಿದ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.