ಉಳ್ಳಾಲ ತಾಲೂಕು ಡಿವೈಎಫ್‌ಐ ಸಮ್ಮೇಳನ
ಮಂಗಳೂರು, ಸೆ.17: ಸ್ವಾತಂತ್ರ್ಯ ಚಳವಳಿ ಆರಂಭಗೊಂಡಾಗ ಅದು ಯಾವಾಗ ಕೊನೆಯಾಗುತ್ತದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಹಾಗಾಗಿ ನೆಮ್ಮದಿಯ ಜೀವನಕ್ಕಾಗಿ ಡಿವೈಎಫ್‌ಐ ಚಳುವಳಿ ಮುಂದುವರಿದಿದೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಹೇಳಿದರು.
‘ಜಾತ್ಯತೀತ ಭಾರತಕ್ಕಾಗಿ, ಉದ್ಯೋಗದ ಹಕ್ಕಿಗಾಗಿ’ ಎಂಬ ಘೋಷದೊಂದಿಗೆ ಹರೇಕಳ ಗ್ರಾಪಂ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ರವಿವಾರ ನಡೆದ ಡಿವೈಎಫ್‌ಐ ಉಳ್ಳಾಲ ತಾಲೂಕು 15ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ 70 ವರ್ಷಗಳಲ್ಲಿ ಅತಿಹೆಚ್ಚು ಬಡತನ, ಶೋಷಣೆ, ನಿರುದ್ಯೋಗ ಇದೆ. ಆದರೆ ಪ್ರತಿಯೊಂದು ವಿಚಾರದಲ್ಲೂ ಭಾವನೆಗಳನ್ನು ಕೆರಳಿಸಲಾಗುತ್ತಿವೆ. ರಾಜ್ಯ ಸರಕಾರ ಬಸ್, ಅಕ್ಕಿ, ವಿದ್ಯುತ್‌ನಂತಹ ಉಚಿತ ಬಿಟ್ಟಿ ಭಾಗ್ಯಗಳ ಮೂಲಕ ಜನರನ್ನು ಕೈಚಾಚಿಸಿ ಸ್ವಾಭಿಮಾನ ಕಳೆದುಕೊಳ್ಳುವಂತೆ ಮಾಡುತ್ತಿವೆ. ಅದರ ಬದಲು ಉಚಿತ ಆರೋಗ್ಯ, ಉನ್ನತ ಶಿಕ್ಷಣ, ಉದ್ಯೋಗ ಕೊಡುವುದಾದರೆ ನಾವು ದೇಣಿಗೆ ಸಂಗ್ರಹಿಸಿ ಕೊಡುತ್ತೇವೆ. ಉಚಿತ ಭಾಗ್ಯ ಒಳ್ಳೆಯ ಯೋಜನೆ ಯಾದರೂ ಶಾಶ್ವತವಾಗಿಡುವುದು ಬೇಡ ಎಂದು ಬಿ.ಕೆ. ಇಮ್ತಿಯಾಝ್ ತಿಳಿಸಿದರು.
ಮುನ್ನೂರು ಗ್ರಾಪಂ ಉಪಾಧ್ಯಕ್ಷ ಮಹಾಬಲ ದೆಪ್ಪೆಲಿಮಾರ್ ಮಾತನಾಡಿ, ಡಿವೈಎಫ್‌ಐ ಇಲ್ಲದಿದ್ದರೆ ಸಮಸ್ಯೆಗಳ ವಿರುದ್ಧ ಹೋರಾಡುವವರೇ ಇರುತ್ತಿರಲಿಲ್ಲ. ಜನರಿಗೆ ತಮ್ಮ ಹಕ್ಕಿನ ಬಗ್ಗೆ ಅರಿವಿಲ್ಲ, ಅದನ್ನು ತಿಳಿಸುವ ಕಾರ್ಯ ಸಂಘಟನೆ ಮಾಡುತ್ತಿದೆ ಎಂದು ಹೇಳಿದರು.
ಉಳ್ಳಾಲ ತಾಲೂಕು ಡಿವೈಎಫ್‌ಐ ಅಧ್ಯಕ್ಷ ರಫೀಕ್ ಹರೇಕಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಡಾ.ಜೀವನ್ ರಾಜ್ ಕುತ್ತಾರ್, ಜತೆ ಕಾರ್ಯದರ್ಶಿ ಅಶ್ರಫ್ ಉಳ್ಳಾ, ಕೋಶಾಧಿಕಾರಿ ಅಶ್ರಫ್ ಹರೇಕಳ, ಅಶ್ಫಾಕ್ ಹರೇಕಳ, ಸಿಪಿಎಂ ನಾಯಕರಾದ ಕೆ.ಎಚ್. ಹಮೀದ್, ಯು.ಬಿ.ಲೋಕಯ್ಯ ಉಪಸ್ಥಿತರಿದ್ದರು.
ರಿಝ್ವಾನ್ ಹರೇಕಳ ಸ್ವಾಗತಿಸಿದರು. ಉಪಾಧ್ಯಕ್ಷ ರಝಾಕ್ ಮೊಂಟೆಪದವು ವಂದಿಸಿದರು. ಜತೆ ಕಾರ್ಯದರ್ಶಿ ನಿತಿನ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು.