ಉಳ್ಳಾಲ: ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಹಿಳೆ ಸಮುದ್ರಪಾಲು
ಉಳ್ಳಾಲ: ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಹಿಳೆಯೊಬ್ಬರು ಸಮುದ್ರಪಾಲಾಗಿ ಮೃತಪಟ್ಟ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ದೇರೆಬೈಲ್ ನ ದಿವಂಗತ ಜಗದೀಶ್ ಭಂಡಾರಿ ಎಂಬವರ ಪತ್ನಿ ಉಷಾ (72)ಮೃತಪಟ್ಟವರು.
ಉಷಾ ಅವರ ತಂಗಿ ನಿಶಾ ಭಂಡಾರಿಯವರ ಪತಿ ಕರುಣಾಕರ ಭಂಡಾರಿ ಕೆಲವು ದಿನಗಳ ಹಿಂದೆ ನಿಧನರಾಗಿದ್ದು, ಇಂದು ಅವರ ಪಿಂಡ ಪ್ರದಾನ ವಿಧಿಗಾಗಿ ಕುಟುಂಬಸ್ಥರು ಸೋಮೇಶ್ವರಕ್ಕೆ ಆಗಮಿಸಿದ್ದರು.
ಇವರ ಜೊತೆಗೆ ಉಷಾ ಕೂಡಾ ಬಂದಿದ್ದರು. ಪಿಂಡ ಪ್ರದಾನದ ಬಳಿಕ ಸಮುದ್ರದಲ್ಲಿ ಸ್ನಾನ ಪ್ರಕ್ರಿಯೆ ನಿರ್ವಹಿಸುತ್ತಿದ್ದ ವೇಳೆ ಉಷಾ ಕಾಲುಜಾರಿ ಸಮುದ್ರ ಪಾಲಾಗಿದ್ದಾರೆನ್ನಲಾಗಿದೆ. ಸಹಾಯಕ್ಕಾಗಿ ಕೂಗಿದಾಗ ಸ್ಥಳೀಯರು ಅವರನ್ನು ಸಮುದ್ರದಿಂದ ಮೇಲೆತ್ತಿ ತಟಕ್ಕೆ ತರುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.
ಉಷಾ ಅವರು ಎನ್.ಎಂ.ಪಿಎಯಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿ ಅಸಿಸ್ಟೆಂಟ್ ಸೆಕ್ರೆಟರಿ ಆಗಿ ನಿವೃತ್ತರಾಗಿದ್ದರು. ಮೃತರು ಪುತ್ರಿಯನ್ನು ಅಗಲಿದ್ದಾರೆ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.