ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ

ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ನ 11 ನೇ ವಾರ್ಡ್ ಮಾಡೂರಿನಲ್ಲಿ ಏಳು ಮನೆಗಳಿಗೆ ಸರಕಾರಿ ಜಾಗದಲ್ಲಿ ರಸ್ತೆ ಮಾಡದ ಕಾರಣಕ್ಕೆ ಆಕ್ರೋಶಗೊಂಡ ಪಕ್ಷೇತರ ಸದಸ್ಯ ಹರೀಶ್ ಅವರು ಪ್ರತಿಭಟನೆ ನಡೆಸಲು ಮುಂದಾದ ಘಟನೆ ಕೋಟೆಕಾರ್ ಪ.ಪಂ.ಸಾಮಾನ್ಯ ಸಭೆಯಲ್ಲಿ ನಡೆಯಿತು.
ಕೋಟೆಕಾರ್ ಪ.ಪಂ. ಅಧ್ಯಕ್ಷೆ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾಡೂರು ಬಳಿ ಸರ್ಕಾರಿ ಜಾಗ ಇದ್ದರೂ ರಸ್ತೆ ಆಗುತ್ತಿಲ್ಲ. ಈ ಬಗ್ಗೆ ತಹಶೀಲ್ದಾರ್, ಅಧಿಕಾರಿಗಳ ಗಮನ ಸೆಳೆದರೂ ಸ್ಪಂದನ ಇಲ್ಲ. ಈ ಹಿನ್ನೆಲೆಯಲ್ಲಿ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ಧರಣಿ ನಡೆಸುವುದಾಗಿ ಹೇಳಿ ಅವರು ಅಧ್ಯಕ್ಷರ ಟೇಬಲ್ ಬಳಿ ಜಮಾಯಿಸಿದರು.
ಈ ವೇಳೆ ವಿರೋಧ ಪಕ್ಷದ ಸದಸ್ಯ ಅಹ್ಮದ್ ಬಾವ ಅವರು ನೀವು ಇಲ್ಲಿ ಧರಣಿ ನಡೆಸಿದರೆ ಪ.ಪಂ. ವಿರುದ್ಧ ಧರಣಿ ನಡೆಸಿದಂತೆ ಆಗುತ್ತದೆ. ಪ.ಪಂ ನಲ್ಲಿ ಕೆಲಸ ಆಗುತ್ತದೆ. ಪ್ರತಿಭಟನೆ ಮಾಡುವುದಾದರೆ ತಹಶೀಲ್ದಾರ್ ಕಚೇರಿ ಮುಂದೆ ಜತೆಯಾಗಿ ಮಾಡೋಣ ಎಂದರು.
ಇದೇ ಸಂದರ್ಭದಲ್ಲಿ ಸುಜಿತ್ ಮಾಡೂರು ಮಾತನಾಡಿ, ಪಕ್ಷೇತರ ಸದಸ್ಯ ಹರೀಶ್ ಅವರು ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಧರಣಿ ನಡೆಸಲು ಮುಂದಾಗಿದ್ದಾರೆ. ಮುಂದಿನ ತಿಂಗಳ ಸಭೆ ನಡೆಯುವ ಮೊದಲು ಅವರ ವಾರ್ಡ್ ನ ಸಮಸ್ಯೆ ಇತ್ಯರ್ಥ ಪಡಿಸಬೇಕು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷರ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ದಿವ್ಯ ಸತೀಶ್ ಅವರು 11 ನೇ ವಾರ್ಡ್ ನಲ್ಲಿ ರಸ್ತೆ ಮಾಡಲು ಆಕ್ಷೇಪಣೆ ಇದೆ. ಈ ಕಾರಣದಿಂದ ಸ್ಥಗಿತ ಆಗಿದೆ. ಅಲ್ಲಿ ಸರ್ವೇ ಆಗಬೇಕು. ಇದಕ್ಕೆ ವಿ ಎ ಬೇಕು. ತಹಶೀಲ್ದಾರ್ ಪುಟ್ಟರಾಜು ಕಂದಾಯ ನಿರೀಕ್ಷಕರ ಬಳಿ ಚರ್ಚಿಸಲು ಹೇಳಿದರು. ಕಂದಾಯ ನಿರೀಕ್ಷಕರು ಗಡಿ ಗುರುತು ಮಾಡಲು ಸೂಚನೆ ನೀಡಿದ್ದಾರೆ ಎಂದು ಸಭೆಗೆ ತಿಳಿಸಿದರು.
ಇದರಿಂದ ಕುಪಿತರಾದ ಸದಸ್ಯ ಹರೀಶ್, ತಹಶೀಲ್ದಾರ್ ಪುಟ್ಟರಾಜು ಬಳಿ ಅಲೆದಾಡಿ ಸಾಕಾಗಿದೆ. ರಸ್ತೆ ಕೆಲಸ ಮಾಡುತ್ತೀರಾ,ಇಲ್ಲವಾ ಎಂದು ತಿಳಿಸಬೇಕು. ಭರವಸೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮಾಡೂರು ಸುಜಿತ್ ಅವರು, ಕೋಟೆಕಾರ್ ಪ.ಪಂ.ನಲ್ಲಿ ಕಚೇರಿ ಕೆಲಸ ವೇ ವಿಳಂಬ ಆಗುತ್ತಿದೆ. ಮತ್ತೆ ಸರ್ಕಾರಿ ಜಾಗದಲ್ಲಿ ರಸ್ತೆ ಕೆಲಸ ಎಲ್ಲಿ ಆಗುತ್ತದೆ? ಒಟ್ಟಿನಲ್ಲಿ ಸದಸ್ಯ ಹರೀಶ್ ಅವರ ಹೋರಾಟಕ್ಕೆ ನ್ಯಾಯ ಬೇಕು ಎಂದರು.
ಸಭೆ ನನ್ನ ಅಧ್ಯಕ್ಷತೆಯಲ್ಲಿ ಆಗುತ್ತದೆ. ನನ್ನ ವಿರುದ್ಧ ಹೋರಾಟ ಬೇಡ ಎಂದು ಅಧ್ಯಕ್ಷೆ ದಿವ್ಯ ಸತೀಶ್ ಈ ಸಂದರ್ಭದಲ್ಲಿ ಹೇಳಿದರು.
ಅನುದಾನ:
ಎಲ್ಲಾ ವಾರ್ಡ್ ಗೆ ಅನುದಾನ ಕೊಟ್ಟಿದ್ದೀರಿ. ನನ್ನ ವಾರ್ಡ್ ಗೆ ಅನುದಾನ ಇಲ್ಲ. ಕೆಲಸವೂ ಆಗಿಲ್ಲ. ವಾರ್ಡ್ ಗಳ ಕೆಲಸಕ್ಕೆ ಆದ್ಯತೆ ನೀಡಿ ಎಂದು ಎಸ್ ಡಿಪಿಐ ಸದಸ್ಯ ಸಲೀಮ್ ಸಭೆಯಲ್ಲಿ ಪ್ರಸ್ತಾಪಿಸಿದಾಗ ಆಕ್ರೋಶ ವ್ಯಕ್ತವಾಯಿತು.
ಅಭಿವೃದ್ಧಿ ಕೆಲಸ ಆಗಬೇಕು, ಸಮಸ್ಯೆ ಇತ್ಯರ್ಥ ಆಗಬೇಕು. ಅನುದಾನ ಎಲ್ಲರಿಗೂ ನೀಡಬೇಕು. ಇದನ್ನು ಪದೇ ಪದೇ ಹೇಳಲು ಆಗುವುದಿಲ್ಲ ಎಂದು ಸದಸ್ಯ ಧೀರಜ್ ತಿಳಿಸಿದರು.
ಈ ಬಾರಿ ಐದು ಲಕ್ಷ ಅನುದಾನ ಎಲ್ಲಾ ವಾರ್ಡ್ ಗಳಿಗೆ ಸಮಾನವಾಗಿ ಇಡಲಾಗಿದೆ. ಇದರಲ್ಲಿ ವ್ಯತ್ಯಾಸ ಇಲ್ಲ ಎಂದು ಅಧ್ಯಕ್ಷ ದಿವ್ಯ ಸತೀಶ್ ಹೇಳಿದರು.
ತೆರಿಗೆ:
ತೆರಿಗೆ ಹೆಚ್ಚಳ ಮಾಡುವ ಬಗ್ಗೆ ಮುಖ್ಯಾಧಿಕಾರಿ ಮಾಲಿನಿ ಅವರು ಸಭೆಯಲ್ಲಿ ಪ್ರಸ್ತಾಪಿಸಿದಾಗ ಆಕ್ರೋಶ ವ್ಯಕ್ತವಾಯಿತು. ವಾಣಿಜ್ಯ ವ್ಯವಹಾರ ದ ಮೇಲೆ ಶೇ. 5 ರಷ್ಟು ತೆರಿಗೆ ಹೆಚ್ಚಳ ಮಾಡಿ. ಎಲ್ಲರ ಮೇಲೆ ಹೊರೆ ಹಾಕಬೇಡಿ ಎಂದು ಸುಜಿತ್ ಮಾಡೂರು ತಿಳಿಸಿದರು.
ತೆರಿಗೆ ಹೆಚ್ಚಳ ಮಾಡುವ ಅಗತ್ಯ ಇದೆಯೇ? ತೆರಿಗೆ ಏರಿಕೆ ಕೈಬಿಟ್ಟು ಪಾವತಿಗೆ ಬಾಕಿ ಇರುವ ತೆರಿಗೆ ವಸೂಲಿ ಮಾಡಿದರೆ ಉತ್ತಮ ಎಂದು ಅಹ್ಮದ್ ಬಾವ ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಮಾಲಿನಿ, ತೆರಿಗೆ ಹೆಚ್ಚಳ ಸರ್ಕಾರದ ಆದೇಶ. ಅದನ್ನು ಮಾಡಲೇಬೇಕು ಎಂದು ಸಭೆಗೆ ತಿಳಿಸಿದರು .
2016 ರಿಂದ ಇಂದಿನವರೆಗೆ ತೆರಿಗೆ ಸಹಿತ ಯಾವುದೇ ಲೆಕ್ಕ ಪತ್ರ ಸಿಕ್ಕಿಲ್ಲ. ಈ ಬಗ್ಗೆ ಸಮರ್ಪಕ ವರದಿ, ಲೆಕ್ಕ ಪತ್ರ ನೀಡಬೇಕು ಎಂದು ಸದಸ್ಯ ಸುಜಿತ್ ಮಾಡೂರು ಅಧಿಕಾರಿಗಳಿಗೆ ತಿಳಿಸಿದರು.
ಕಾಮಗಾರಿ:
ಕುಡಿಯುವ ನೀರು ಇನ್ನಿತರ ಕಾಮಗಾರಿಗಳನ್ನು ನಡೆಸಲು ರಸ್ತೆಯನ್ನು ಯಾವುದೇ ಅಗ್ರಿಮೆಂಟ್ ಮಾಡಿದೆ ಅಳೆಯಲಾಗುತ್ತದೆ. ಇದರಿಂದ ರಸ್ತೆ ಹಾಳಾಗುತ್ತದೆ. ಪಂಚಾಯತ್ ಗೆ ನಷ್ಟ ಆಗುತ್ತದೆ. ಈ ಬಗ್ಗೆ ಕ್ರಮ ಆಗಬೇಕು ಎಂದು ಸದಸ್ಯ ಸುಜಿತ್ ಮಾಡೂರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಅಹ್ಮದ್ ಬಾವ ಅವರು, ಕಾಮಗಾರಿ ಆಗಬೇಕು. ಕ್ರಮ ಪ್ರಕಾರ ಆಗಲಿ. ಕಾನೂನಿನಲ್ಲಿ ಎಡವಟ್ಟು ಬೇಡ. ಸಮರ್ಪಕವಾಗಿ ಎಲ್ಲರಿಗೂ ಅನುಕೂಲ ಆಗುವಂತೆ ಮಾಡಿ ಎಂದು ಸಲಹೆ ನೀಡಿದರು.
ದಾರಿದೀಪ :
ದಾರಿದೀಪ ಎಲ್ಲಾ ಕಡೆ ಅಳವಡಿಕೆ ಆಗಬೇಕು. ಮೀಟರ್ ಅಳವಡಿಸಬೇಕು. ಮೆಸ್ಕಾಂ ಖುಷಿ ಬಂದಂತೆ ಬಿಲ್ ನೀಡುವುದು ಬೇಡ ಎಂದು ಸದಸ್ಯ ಸುಜಿತ್ ಮಾಡೂರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್ ದಿನೇಶ್, ಮೆಸ್ಕಾಂ ಈವರೆಗೆ ನೀಡಿರುವುದು ಅಂದಾಜು ಬಿಲ್. ಮೀಟರ್ ಅಳವಡಿಕೆ ಇಲ್ಲ ಎಂದರು.
ದಾರಿದೀಪ ಅಳವಡಿಕೆ ಅಗತ್ಯ ಇರುವ ಸ್ಥಳಕ್ಕೆ ಮೊದಲು ಆಗಬೇಕು. ಇದನ್ನು ಪರಿಶೀಲನೆ ನಡೆಸಿದ ಬಳಿಕ ಪ್ರತಿ ವಾರ್ಡ್ ಗೆ ದಾರಿದೀಪ ನೀಡಲಾಗುವುದು ಎಂದು ಅಧ್ಯಕ್ಷ ದಿವ್ಯ ಸತೀಶ್ ಹೇಳಿದರು.
ಸಮಿತಿ ರಚನೆ:
ತೆರಿಗೆ, ಕಂದಾಯ, ನೀರಿನ ಬಿಲ್ ಸಹಿತ ವಿವಿಧ ಸಮಸ್ಯೆ ಗಳ ಪರಿಹಾರಕ್ಕೆ ಮಾಡಲಾದ ಸಮಿತಿಯ ಸಭೆ ಈವರೆಗೆ ಕರೆಯಲಿಲ್ಲ. ಸಭೆ ಕರೆಯದಿದ್ದರೆ ಸಮಿತಿ ಯಾಕೆ ಎಂದು ಆಡಳಿತ ರೂಡ ಪಕ್ಷದ ಸದಸ್ಯರೊಬ್ಬರು ಅಧ್ಯಕ್ಷರನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ದಿವ್ಯ ಸತೀಶ್ ಅವರು, ಸಮಿತಿ ಸಭೆ ಸದ್ಯ ಕರೆಯುವುದಿಲ್ಲ. ಸ್ವಲ್ಪ ಸಮಯ ಕಳೆಯಲಿ ಎಂದರು.
ಸಭೆ ಕರೆಯಲು ಕಷ್ಟವಾಗುವುದಾದರೆ ಸಮಿತಿ ಬರ್ಖಾಸ್ತು ಮಾಡಿ. ಅಂತಹ ಸಮಿತಿ ನಮಗೆ ಅಗತ್ಯ ಇಲ್ಲ ಎಂದು ಧೀರಜ್ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸುಜಿತ್ ಮಾಡೂರು ಅವರು ಸಮಿತಿ ಬರ್ಖಾಸ್ತು ಮಾಡಿ ಹಿಟ್ಲರ್ ಆಡಳಿತ ಮಾಡಬೇಡಿ. ಅಂತಹ ಆಡಳಿತ ಬೇಡ ಎಂದು ಹರಿಹಾಯ್ದರು.
ಅನುದಾನ:
ಕೋಟೆಕಾರ್ ಪ.ಪಂ. ಅಭಿವೃದ್ಧಿಗೆ ಕ್ಷೇತ್ರದ ಶಾಸಕ, ಸಂಸದರಿಂದ ಅನುದಾನ ಕೇಳಬೇಕು. 10 ಲಕ್ಷ ಅನುದಾನ ಅವರು ನೀಡಬೇಕು. ಈ ಅನುದಾನದಲ್ಲಿ ರಸ್ತೆ ದುರಸ್ತಿ ಬೇಡ. ಬೇರೆ ಅಭಿವೃದ್ಧಿ ಕೆಲಸ ಮಾಡಬೇಕು ಎಂದು ಸದಸ್ಯ ಸುಜಿತ್ ಮಾಡೂರು ಸಲಹೆ ನೀಡಿದರು.