ಉಳ್ಳಾಲ: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಸಮುದ್ರಕ್ಕೆ ಬಿದ್ದು ಇಬ್ಬರು ಮೀನುಗಾರರು ಮೃತ್ಯು
ಮೈಕೆಲ್ (ಎಡ) ತುಳಸೀರಾಮ್
ಉಳ್ಳಾಲ, ಜ.13: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೀನುಗಾರಿಕೆ ವೇಳೆ ಸಮುದ್ರಕ್ಕೆ ಬಿದ್ದು ಇಬ್ಬರು ಮೀನುಗಾರರು ಮೃತಪಟ್ಟ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೋಣಿ ಬಂಡೆಕಲ್ಲಿಗೆ ಢಿಕ್ಕಿ
ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಗಾಳಿಯ ರಭಸಕ್ಕೆ ಸಮುದ್ರದಲ್ಲಿ ಬಂಡೆಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಮೀನುಗಾರರೊಬ್ಬರು ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಮೊಗವೀರಪಟ್ಣ ಸಮೀಪದ ಆಳ ಸಮುದ್ರದಲ್ಲಿ ನಡೆದಿದೆ.
ಮೂಲತಃ ತಿರುವನಂತಪುರ ನಿವಾಸಿ, ಪ್ರಸಕ್ತ ಮೊಗವೀರಪಟ್ಣದಲ್ಲಿ ನೆಲೆಸಿದ್ದ ಮೈಕೆಲ್ (60) ಮೃತ ಪಟ್ಟವರು.
ಮುಹಮ್ಮದ ಕಲಂದರ್ ಷಾ ಎಂಬವರ ಮಾಲಕತ್ವದ ನಾಡದೋಣಿಯಲ್ಲಿ ಮೈಕಲ್ ಸೇರಿದಂತೆ ಮೂವರು ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದಲ್ಲಿ ಬಂಡೆಯೊಂದರ ಸಮೀಪ ಮೀನುಗಾರಿಕೆಯಲ್ಲಿ ನಿರತರಾಗಿದ್ದರು. ಈ ವೇಳೆ ಬೀಸಿದ ಬಿರುಗಾಳಿಗೆ ಹಗ್ಗ ತುಂಡಾಗಿ ದೋಣಿ ಬಂಡೆಕಲ್ಲಿಗೆ ಬಡಿದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ದೋಣಿ ಚಲಾಯಿಸುತ್ತಿದ್ದ ಮೈಕಲ್ ತಲೆಗೆ ದೋಣಿಯ ಮರದ ತುಂಡೊಂದು ಬಡಿದ ಪರಿಣಾಮ ಅವರು ಸಮುದ್ರಕ್ಕೆ ಎಸೆಯಲ್ಪಟ್ಟರೆನ್ನಲಾಗಿದೆ.
ತಕ್ಷಣ ಸಹ ಮೀನುಗಾರರು ಮೈಕಲ್ ರನ್ನು ಜೊತೆಗಿದ್ದ ಮೀನುಗಾರರು ಸಮುದ್ರದಿಂದ ಮೇಲಕ್ಕೆತ್ತಿದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರೆನ್ನಲಾಗಿದೆ.
ಮೈಕಲ್ ಮೃತದೇಹವನ್ನು ಬೇರೆ ಬೇರೆ ಮೀನುಗಾರಿಕಾ ಬೋಟ್ ಸಹಾಯದಿಂದ ದಡಕ್ಕೆ ತರಲಾಗಿದೆ.
ಘಟನೆ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಲೆ ಎಳೆಯುವಾಗ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು
ಮೀನುಗಾರಿಕೆಯಲ್ಲಿ ನಿರತರಾಗಿದ್ದ ವೇಳೆ ಮೀನಿಗೆ ಹಾಕಿದ್ದ ಬಲೆ ಎಳೆಯುವ ಸಂದರ್ಭ ಆಕಸ್ಮಿಕವಾಗಿ ಸಮುದ್ರಕ್ಕೆ ಜಾರಿ ಬಿದ್ದು, ಮೀನುಗಾರರೊಬ್ಬರು ಮೃತಪಟ್ಟ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಉಳ್ಳಾಲ ಸಮುದ್ರದಿಂದ ಕೆಲವು ಮಾರು ದೂರ ಈ ಘಟನೆ ನಡೆದಿದ್ದು, ಮೊಗವೀರಪಟ್ಣ ನಿವಾಸಿ ತುಳಸೀರಾಮ್ (62) ಮೃತಪಟ್ಟ ಮೀನುಗಾರ.
ಘಟನೆಯ ವಿವರ : ಮೊಗವಿಇರಪಟ್ಣ ನಿವಾಸಿ ಕಿರಣ್ ಪುತ್ರನ್ ಎಂಬವರಿಗೆ ಸೇರಿದ್ದ ಪರ್ಸಿನ್ ಬೋಟ್ ನಲ್ಲಿ ತುಳಸಿರಾಮ್ ಸೇರಿದಂತೆ 30 ಮೀನುಗಾರರು ಗುರುವಾರ ರಾತ್ರಿ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರ ನಡುವೆ ಬಲೆ ಹಾಕಿ ಮಲಗಿದ್ದ ಅವರು ಬೆಳಗ್ಗೆ ಬಲೆಯನ್ನು ಎಳೆಯುತ್ತಿದ್ದಾಗ ತುಳಸೀರಾಮ್ ಆಯ ತಪ್ಪಿ ಸಮುದ್ರಕ್ಕೆ ಬಿದ್ದರೆನ್ನಲಾಗಿದೆ. ತಕ್ಷಣ ಸಹ ಮೀನುಗಾರರಾದ ಜಿತೇಂದ್ರ ಬಂಗೇರ ಮತ್ತು ಪೃಥ್ವಿನ್ ಸಮುದ್ರಕ್ಕೆ ಜಿಗಿದು ಅವರನ್ನು ರಕ್ಷಿಸಲು ಯತ್ನಿಸಿದದೂ ಅಷ್ಟರಲ್ಲಿ ಮುಳುಗಿದ್ದ ತುಳಸೀರಾಮ್ ಸಮುದ್ರದಲ್ಲೇ ಮೃತಪಟ್ಟಿದ್ದರು.
ಮೃತದೇಹವನ್ನು ಮೇಲೆಕ್ಕೆತ್ತಿ ಉಳ್ಳಾಲಕ್ಕೆ ತರಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.