ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅವಿಭಜಿತ ತಾಲೂಕು ಮಟ್ಟದ ಕರಾಟೆ ಸ್ಪರ್ಧೆ
ಮಕ್ಕಳಿಗೆ ಶೈಕ್ಷಣಿಕ, ಬೌದ್ಧಿಕ ಕ್ಷಮತೆ ಜೊತೆಗೆ ದೈಹಿಕ ಕ್ಷಮತೆಯೂ ಅಗತ್ಯ-ಸವಣೂರು ಸೀತಾರಾಮ ರೈ
ಪುತ್ತೂರು: ಮಕ್ಕಳಿಗೆ ಶೈಕ್ಷಣಿಕ ಮತ್ತು ಬೌದ್ಧಿಕ ಕ್ಷಮತೆ ಮಾತ್ರ ಇದ್ದರೆ ಸಾಕಾಗಲಾರದು. ಇದರ ಜೊತೆಗೆ ದೈಹಿಕ ಕ್ಷಮತೆಯೂ ಬೇಕಾಗಿದೆ. ಕ್ರೀಡೆಯಿಂದ ದೈಹಿಕ ಕ್ಷಮತೆ ಕಾಯ್ದುಕೊಳ್ಳಲು ಸಾಧ್ಯವಿದೆ. ಪ್ರಸ್ತುತ ಶಾಲಾ ಹಂತ ದಾಟಿದ ಬಳಿಕ ಮಕ್ಕಳು ಕ್ರೀಡೆಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಹೆತ್ತವರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಹೇಳಿದರು.
ಅವರು ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಮಂಗಳವಾರ ನಡೆದ ಅವಿಭಜಿತ ಪುತ್ತೂರು ಮತ್ತು ಕಡಬ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲೆಗಳ ಬಾಲಕ ಹಾಗೂ ಬಾಲಕಿಯರ ವಿಭಾಗದ ಕರಾಟೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ ವಿ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕರಾಟೆಯು ಸ್ವಯಂ ರಕ್ಷಣೆಯ ಕಲೆಯಾಗಿದ್ದು ವಿಶೇಷವಾಗಿ ಇದು ಹೆಣ್ಣುಮಕ್ಕಳಿಗೆ ಅತ್ಯವಶ್ಯವಾದದ್ದಾಗಿದೆ ಎಂದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಮಾತನಾಡಿದರು. ವೇದಿಕೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು,ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ, ದೈಹಿಕ ಶಿಕ್ಷಣ ಶಿಕ್ಷಕರ ಜಿಲ್ಲಾ ಸಂಘದ ಗೌರವಾಧ್ಯಕ್ಷ ಮಾಮಚ್ಚನ್ ಉಪಸ್ಥಿತರಿದ್ದರು.
ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ದೀಪಕ್ ವಂದಿಸಿದರು. ಖತೀಜತ್ ಫಾತಿಮಾ ನಿರೂಪಿಸಿದರು.