ಸುಳ್ಯದಲ್ಲಿ ಅನೈತಿಕ ಪೊಲೀಸ್ಗಿರಿ; ಯುವಕನಿಗೆ ಸಂಘ ಪರಿವಾರದ ಕಾರ್ಯಕರ್ತರಿಂದ ಹಲ್ಲೆ: ಓರ್ವ ವಶಕ್ಕೆ
ಸುಳ್ಯ, ಆ.12: ಕೇರಳದ ಮಹಿಳೆಯೊಬ್ಬರಿಗೆ ಸುಳ್ಯದಲ್ಲಿ ತಂಗಲು ರೂಂ ಕೊಡಿಸಲು ಜೊತೆಗೆ ತೆರಳಿದ್ದ ಕಾರಣಕ್ಕೆ ಯುವಕನೋರ್ವನಿಗೆ ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ತಂಡವೊಂದು ಹಲ್ಲೆ ನಡೆಸಿದ ಘಟನೆ ಸುಳ್ಯ ಠಾಣಾ ವ್ಯಾಪ್ತಿಯ ಅರಂತೋಡು ಸಮೀಪ ಶನಿವಾರ ಸಂಜೆ ನಡೆದಿದೆ.
ಅನೈತಿಕ ಪೊಲೀಸ್ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೂಲತಃ ಮಣಪ್ಪುರಂ ನಿವಾಸಿ ಅರಂತೋಡಿನಲ್ಲಿ ಲೀಸ್ಗೆ ತೋಟ ನಡೆಸುತ್ತಿರುವ ಜಲೀಲ್ ಹಲ್ಲೆಗೊಳಗಾದ ಯುವಕ.
ಜಲೀಲ್ಗೆ ಮಣಪ್ಪುರಂನಲ್ಲಿ ಪರಿಚಯವಿದ್ದ ಮಹಿಳೆಯೊಬ್ಬರು ಮಡಿಕೇರಿಗೆ ಆಗಮಿಸಿದ್ದು, ಅಲ್ಲಿಂದ ಊರಿಗೆ ಹಿಂದಿರುಗುವ ವೇಳೆ ಸುಳ್ಯದಲ್ಲಿ ಫ್ರೆಶ್ ಅಪ್ ಆಗಲು ರೂಮ್ ಬಯಸಿದ್ದರು. ಇದಕ್ಕಾಗಿ ಅವರು ಜಲೀಲ್ ನೆರವು ಕೇಳಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಕರೆದುಕೊಂಡು ಜಲೀಲ್ ಎರಡು ಕಡೆ ರೂಂ ಪಡೆಯಲು ಯತ್ನಿಸಿದ್ದರೂ ರೂಂ ಸಿಕ್ಕಿರಲಿಲ್ಲ. ಬಳಿಕ ಮಹಿಳೆ ಹಿಂದಿರುಗಿದ್ದಾರೆ ಎನ್ನಲಾಗಿದೆ.
ಈ ನಡುವೆ ಮಹಿಳೆಗೆ ಯುವಕನೋರ್ವ ರೂಂ ಕೊಡಿಸಲು ಯತ್ನಿಸಿದ ವಿಚಾರ ತಿಳಿದು ಸಂಘ ಪರಿವಾರದ ಕಾರ್ಯಕರ್ತರ ತಂಡ ಕಾರಿನಲ್ಲಿ ಅರಂತೋಡು ಕಡೆಗೆ ತೆರಳುತ್ತಿದ್ದ ಜಲೀಲ್ರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದೆ ಎಂದು ಪೊಲೀಸ್ ದೂರಿನಲ್ಲಿ ಜಲೀಲ್ ಉಲ್ಲೇಖಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.