ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ `ಅಮಲು' ಕಿರು ಚಿತ್ರಕ್ಕೆ ಪ್ರಥಮ ಸ್ಥಾನ
ಉಪ್ಪಿನಂಗಡಿ: ದ.ಕ. ಜಿಲ್ಲಾಡಳಿತ, ದ.ಕ. ಜಿಲ್ಲಾ ಪೊಲೀಸ್ ಇಲಾಖೆಯ ಜಂಟಿ ಆಶ್ರಯದಲ್ಲಿ `ಮಾದಕ ವಸ್ತು'ಗಳ ವಿರೋಧಿ ಕಾರ್ಯಕ್ರಮದ ಅಂಗವಾಗಿ ನಡೆದ ಕಿರುಚಿತ್ರ ಸ್ಪರ್ಧೆಯಲ್ಲಿ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ `ಅಮಲು' ಕಿರುಚಿತ್ರವು ಪ್ರಥಮ ಸ್ಥಾನವನ್ನು ಗಳಿಸಿಕೊಂಡಿದೆ.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿದರು.
ದುಷ್ಟ ಕೂಟದ ಚಕ್ರವ್ಯೂಹಕ್ಕೆ ಸಿಲುಕಿದ ಅಮಾಯಕ ಹುಡುಗನೋರ್ವ ಮಾದಕ ವ್ಯಸನಿಯಾಗಿ ತನ್ನ ಸಾವಿಗೆ ತಾನೇ ಕಾರಣವಾಗುವ ಮೂಲಕ ಇಡೀ ಕುಟುಂಬ ಹೇಗೆ ಅನಾಥವಾಗುತ್ತದೆ ಎನ್ನುವುದನ್ನು ಈ ಕಿರುಚಿತ್ರ ಸಾರುತ್ತಿದ್ದು, ವಿದ್ಯಾರ್ಥಿ ಗಳು ಮನಕಲಕುವ ಸನ್ನಿವೇಶವನ್ನು ಅತ್ಯಂತ ಮನೋಜ್ಞವಾಗಿ ಅಭಿನಯಿಸಿದ್ದಾರೆ.
ದ್ವಿತೀಯ ಸಮಾಜಕಾರ್ಯ ವಿಭಾಗದ ಪದವಿ ವಿದ್ಯಾರ್ಥಿ ಅಕ್ಷಯ್ ಕೆ. ಇವರು ಚಿತ್ರಕಥೆ ಬರೆದಿದ್ದು, ಆನಂದ್ ಬಂಗೇರ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಸಹ ನಿರ್ದೇಶನ ವಿಜಯ್ ಅವರದ್ದಾಗಿದ್ದು, ಸುಜೀತ್ ಮತ್ತು ಮನೋಜ್ ಕ್ಯಾಮರಾಮೆನ್‍ಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಧೀರಜ್ ಎಸ್.ಕೆ. ಸಂಕಲನ ಮಾಡಿದ್ದು, ವಿದ್ಯಾರ್ಥಿಗಳಾದ ಧನುಷ್, ಕೆ. ಅಕ್ಷಯ್, ಅನ್ಸರ್ ಎ.ಎಂ., ಹಿತೇಶ್, ರಶ್ಮಿತಾ, ತೇಜಾಶ್ರೀ, ನವ್ಯಶ್ರೀ, ಕೀರ್ತನ, ಶ್ರೇಯ ಕುಮಾರಿ ಈ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ.