ಉಪ್ಪಿನಂಗಡಿ ಗ್ರಾ.ಪಂ.: ಕಾಂಗ್ರೆಸ್ ಬೆಂಬಲಿತ ಸದಸ್ಯರ ಪಾಲಾದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ
ಉಪ್ಪಿನಂಗಡಿ: ಇಲ್ಲಿನ ಗ್ರಾ.ಪಂ.ಗೆ ನಡೆದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಈ ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತ ಸದಸ್ಯರ ಪಾಲಾಗಿದ್ದು, ಅಧ್ಯಕ್ಷರಾಗಿ ಲಲಿತಾ ಹಾಗೂ ಉಪಾಧ್ಯಕ್ಷರಾಗಿ ವಿದ್ಯಾಲಕ್ಷ್ಮೀ ಪ್ರಭು ಆಯ್ಕೆಯಾಗಿದ್ದಾರೆ.
ಗ್ರಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗೆದ್ದು, ಬಳಿಕ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿ ಉಪಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದ ವಿನಾಯಕ ಪೈ ಈ ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಿದ್ದೇ ಈ ಫಲಿತಾಂಶಕ್ಕೆ ಕಾರಣ.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಲಲಿತಾ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ರುಕ್ಮಿಣಿ ಅವರು ನಾಮಪತ್ರ ಸಲ್ಲಿಸಿದ್ದು, ಚುನಾವಣೆ ನಡೆದು ಫಲಿತಾಂಶ ಪ್ರಕಟವಾದಾಗ, ಲಲಿತಾ 11 ಮತಗಳನ್ನು ಪಡೆದು, ವಿಜಯಿಯಾದರು, ರುಕ್ಮಿಣಿ 9 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಗ್ರಾ.ಪಂ. ಚುನಾವಣೆಯ ಸಂದರ್ಭ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗೆದ್ದು ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಯ ವೇಳೆ ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದ ವಿದ್ಯಾಲಕ್ಷ್ಮೀ ಪ್ರಭು ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಂತಿ ರಂಗಾಜೆ ನಾಮಪತ್ರ ಸಲ್ಲಿಸಿದ್ದು, ಚುನಾವಣೆ ನಡೆದು ಪಲಿತಾಂಶ ಪ್ರಕಟವಾದಾಗ 11 ಮತಗಳನ್ನು ಪಡೆದು ವಿದ್ಯಾಲಕ್ಷ್ಮೀ ಪ್ರಭು ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. 9 ಮತಗಳನ್ನು ಪಡೆದ ಜಯಂತಿ ರಂಗಾಜೆ ಪರಾಭವಗೊಂಡರು.
20 ಸದಸ್ಯ ಬಲವನ್ನು ಹೊಂದಿರುವ ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿತ್ತು. ಇಲ್ಲಿ 10 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದರೆ, ಕಾಂಗ್ರೆಸ್ ಬೆಂಬಲಿತ ಸದಸ್ಯರು ಐವರಿದ್ದರು. ನಾಲ್ಕು ಮಂದಿ ಸದಸ್ಯರು ಎಸ್‍ಡಿಪಿಐ ಬೆಂಬಲಿತ ಸದಸ್ಯರಾಗಿದ್ದರು. ಓರ್ವ ಸದಸ್ಯ ಬಿಜೆಪಿಯ ವಿರುದ್ಧ ಬಂಡಾಯ ನಿಂತು ಪಕ್ಷೇತರನಾಗಿ ಗೆದ್ದು ಬಂದಿದ್ದರು.
ಕಳೆದ ಅವಧಿಯಲ್ಲಿ ಏನಾಗಿತ್ತು?: ಕಳೆದ ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಎಸ್.ಡಿ.ಪಿ.ಐ. ಬೆಂಬಲಿತರಾಗಿದ್ದ 4 ಮಂದಿ ಮತ್ತು ಬಿಜೆಪಿಯಿಂದ ಬಂಡಾಯವೆದ್ದು ಚುನಾವಣೆಯಲ್ಲಿ ಪಕ್ಷೇತರಾಗಿ ಸ್ಪರ್ಧಿಸಿ ಗೆದ್ದಿದ್ದ ಸಣ್ಣಣ್ಣ ಸೇರಿದಂತೆ ಒಟ್ಟು 5 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ಪರ ನಿಂತರು. ಇದರೊಂದಿಗೆ ಬಿಜೆಪಿ ಬೆಂಬಲಿತೆಯಾಗಿದ್ದ ವಿದ್ಯಾಲಕ್ಷ್ಮಿಯವರನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಸೆಳೆದುಕೊಂಡು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಮಾಡಿ ಕಣಕ್ಕೆ ಇಳಿಸಿತ್ತು. ಕಾಂಗ್ರೆಸ್ ಬೆಂಬಲಿತ ಸದಸ್ಯರು 5 ಮತ್ತು ಕಾಂಗ್ರೆಸ್‍ಗೆ ಮತ್ತೆ ಬೆಂಬಲ ಕೊಟ್ಟ ಆರು ಸದಸ್ಯರು ಹೀಗೆ ಒಟ್ಟು 11 ಸದಸ್ಯರ ಬೆಂಬಲ ಹೊಂದಿದ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬಣ ಉಪಾಧ್ಯಕ್ಷ ಸ್ಥಾನಕ್ಕೆ ಮುಹಮ್ಮದ್ ತೌಸೀಫ್ ಯು.ಟಿ. ಅವರನ್ನು ಕಣಕ್ಕಿಳಿಸಿ, ಈ ಬಾರಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ತಮ್ಮದೆಂಬ ರಾಜಕೀಯ ಲೆಕ್ಕಾಚಾರದಲ್ಲಿತ್ತು. ಆ ಸಂದರ್ಭ ಕಾಂಗ್ರೆಸ್‍ನ ಏಟಿಗೆ ಎದಿರೇಟು ನೀಡಿದ್ದ ಬಿಜೆಪಿಯು ಕಾಂಗ್ರೆಸ್ ಬೆಂಬಲಿತ ಸದಸ್ಯನಾಗಿ ಚುನಾವಣೆಯಲ್ಲಿ ಗೆದ್ದಿದ್ದ ವಿನಾಯಕ ಪೈಯನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಸಫಲವಾಗಿತ್ತಲ್ಲದೆ, ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಮಾಡಿ ಕಣಕ್ಕಿಳಿಸಿತ್ತು. ಇದರಿಂದಾಗಿ ಚುನಾವಣೆ ನಡೆದಾಗ ಕಾಂಗ್ರೆಸ್ ಬೆಂಬಲಿತರಿಗೆ 10 ಹಾಗೂ ಬಿಜೆಪಿ ಬೆಂಬಲಿತರಿಗೆ 10 ಮತಗಳು ಬರುವಂತಾಯಿತು. ಮತ್ತೆ ಚೀಟಿ ಎತ್ತುವಿಕೆಯ ಮೂಲಕ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ನಡೆದಾಗ ಅದೃಷ್ಟ ಲಕ್ಷ್ಮೀ ಬಿಜೆಪಿ ಬೆಂಬಲಿತ ಬಣದ ಪಾಲಾಗಿದ್ದು, ಉಷಾ ಮುಳಿಯ ಅಧ್ಯಕ್ಷರಾಗಿ ಹಾಗೂ ವಿನಾಯಕ ಪೈ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಈ ಬಾರಿ ಏನಾಯಿತು?: ಆದರೆ ಈ ಬಾರಿ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಯ ಸಂದರ್ಭ ಕಳೆದ ಬಾರಿ ಬಿಜೆಪಿ ಪಾಳಯಕ್ಕೆ ಹೋಗಿದ್ದ ವಿನಾಯಕ ಪೈಯವರನ್ನು ಕಾಂಗ್ರೆಸ್ ಬೆಂಬಲಿತ ಸದಸ್ಯರು ತಮ್ಮತ್ತ ಸೆಳೆದುಕೊಳ್ಳಲು ಯಶಸ್ವಿ ಯಾಗಿದ್ದು, ಎಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿ ಮತ್ತು ವಿನಾಯಕ ಪೈಯವರ ಬೆಂಬಲದಿಂದ 11 ಮತಗಳನ್ನು ಪಡೆದು ಜಯಗಳಿಸುವಲ್ಲಿ ಯಶಸ್ವಿಯಾಗಿದೆ.
ಹೊಂದಾಣಿಕೆ ನೀತಿಗೆ ಮುಂದಾಗಿತ್ತು ಕಾಂಗ್ರೆಸ್: ಈ ಬಾರಿ ಉಪ್ಪಿನಂಗಡಿ ಗ್ರಾ.ಪಂ.ನ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾತಿ ಬಂದಿತ್ತು. ಇಲ್ಲಿ ಅನುಸೂಚಿತ ಜಾತಿಯ ಮೀಸಲಾತಿಯಡಿ ಗ್ರಾ.ಪಂ. ಸದಸ್ಯರಾದವರು ಇಬ್ಬರು ಮಹಿಳೆಯರು ಮಾತ್ರ. ಹಾಗಾಗಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳೆರೆಡೂ ಮಹಿಳೆಯರದ್ದೇ ಪಾಲಾಗುವುದು ಮೊದಲೇ ಎಲ್ಲರಿಗೂ ತಿಳಿದಿತ್ತು. ಆದ್ದರಿಂದ ಈ ಬಾರಿ ಯಾವುದೇ ರಾಜಕೀಯ ಕಸರತ್ತುಗಳಿಗೆ ಅವಕಾಶ ನೀಡದೇ ಹೊಂದಾಣಿಕೆ ನೀತಿಯತ್ತ ಹೋಗಲು ಮನಸ್ಸು ಮಾಡಿದ್ದ ಕಾಂಗ್ರೆಸ್, ಅಧ್ಯಕ್ಷ ಸ್ಥಾನ ಬಿಜೆಪಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‍ಗೆ ಎಂಬ ನಿಲುವನ್ನು ಬಿಜೆಪಿಯ ಮುಂದಿಟ್ಟಿತ್ತು ಎಂಬ ಮಾಹಿತಿಯನ್ನು ಕೆಲವೊಂದು ಮೂಲಗಳು ಹೇಳುತ್ತಿವೆ. ಆದರೆ ಬಿಜೆಪಿಯು ಇದಕ್ಕೆ ಒಪ್ಪಿಕೊಳ್ಳದೇ, ಚುನಾವಣೆಯನ್ನು ಎದುರಿಸಲು ಸಿದ್ಧವಾಗಿತ್ತು. ಆಗ ವಿನಾಯಕ ಪೈಯವರನ್ನು ತಮ್ಮ ಕಡೆ ಮತ್ತೆ ಸೆಳೆಯುವ ಯೋಜನೆ ಕಾಂಗ್ರೆಸ್ ಹಾಕಿಕೊಂಡಿತ್ತು. ಇದರ ಹಿಂದೆ ಗ್ರಾ.ಪಂ. ಸದಸ್ಯರಾದ ಯು.ಟಿ. ತೌಸೀಫ್ ಮತ್ತು ಅಬ್ದುರ್ರಹ್ಮಾನ್ ಅವರ ಮಾಸ್ಟರ್ ಮೈಂಡ್ ಕೆಲಸ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.