ಉಪ್ಪಿನಂಗಡಿ| ಕಟ್ಟಡ ವಿಚಾರದಲ್ಲಿ ತಕರಾರು; ಅಂಗನವಾಡಿ, ಸಂಘಟನೆ ಮಧ್ಯೆ ಸಂಘರ್ಷ
ಉಪ್ಪಿನಂಗಡಿ, ಡಿ.16: 34 ನೆಕ್ಕಿಲಾಡಿ ಗ್ರಾಮದ ಮೈಂದಡ್ಕ ಎಂಬಲ್ಲಿ ಅಂಗನವಾಡಿಗೆ ಮಂಜೂರುಗೊಂಡ ಜಾಗದಲ್ಲಿರುವ ಕಟ್ಟಡವೊಂದಕ್ಕೆ ಸಂಬಂಧಿಸಿ ಅಂಗನವಾಡಿ ಮತ್ತು ಸಂಘಟನೆಯೊಂದರ ಮಧ್ಯೆ ಸಂಘರ್ಷ ಉಂಟಾಗಿದೆ.
ರವಿವಾರ ಅಂಗನವಾಡಿ ಕಟ್ಟಡದೊಳಗೆ ನುಗ್ಗಿದ ಕೆಲವರು ಅಲ್ಲಿದ್ದ ಕಪಾಟು, ಮೇಜು, ಗೋಡೆಗೆ ಸಂಘಟನೆಯ ಹೆಸರಿರುವ ಸ್ಟಿಕ್ಕರ್ ಅಂಟಿಸಿರುವ ಘಟನೆ ನಡೆದಿದೆ.
ಮೈಂದಡ್ಕದಲ್ಲಿ ಅಂಗನವಾಡಿ ಮಂಜೂರುಗೊಳಿಸಬೇಕೆಂಬ ಬೇಡಿಕೆ 34 ನೆಕ್ಕಿಲಾಡಿ ಗ್ರಾಮ ಸಭೆಯಲ್ಲಿ ಹಲವು ಬಾರಿ ಪ್ರಸ್ತಾವಗೊಂಡಿತ್ತು. ಕೊನೆಗೂ ಅಂಗನವಾಡಿ ಮಂಜೂರುಗೊಂಡಿದ್ದು, ಆದರೆ ಕಟ್ಟಡವಿಲ್ಲದ್ದರಿಂದ ಅಲ್ಲೇ ಸಮೀಪದಲ್ಲಿ ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿದ ಕಟ್ಟಡದಲ್ಲಿ ಅಂಗನವಾಡಿ ಕಾರ್ಯಾಚರಿಸುತ್ತಿತ್ತು. ಈ ನಡುವೆ ಮೈಂದಡ್ಕದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನಿವೇಶನಕೋರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು.
ಇನ್ನೊಂದೆಡೆ ‘ನಮ್ಮೂರು- ನಮ್ಮವರು ಸಂಘ’ ಹಾಗೂ ಸಾರ್ವಜನಿಕರ ನೆರವಿನಲ್ಲಿ ಸರ್ವೇ ನಂ. 88/1ರಲ್ಲಿರುವ ಸರಕಾರಿ ಜಾಗದಲ್ಲಿ ಕಟ್ಟಡವೊಂದನ್ನು ನಿರ್ಮಿಸಿತ್ತು. ಅಂಗನವಾಡಿಗೆ ಮೈಂದಡ್ಕದಲ್ಲಿ ಕಟ್ಟಡವಿಲ್ಲದ್ದರಿಂದ ಅದನ್ನು ಅಂಗನವಾಡಿಗೆ ನೀಡಿತ್ತು. ಬಳಿಕ ಅಂಗನವಾಡಿ ಅದರಲ್ಲಿ ಕಾರ್ಯಾಚರಿಸುತ್ತಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ನೀಡಿದ ನಿವೇಶನದ ಶಿಪಾರಸನ್ನು ಪುರಸ್ಕರಿಸಿದ ಕಂದಾಯ ಇಲಾಖೆ ಸರ್ವೇ ನಂ.88/1ರಲ್ಲಿ ಅಂಗನವಾಡಿಗೆಂದು 5 ಸೆಂಟ್ಸ್ ಜಾಗವನ್ನು ಮಂಜೂರುಗೊಳಿಸಿತು. ಇತ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮೈಂದಡ್ಕ ಅಂಗನವಾಡಿಗೆ ಕಾರ್ಯಕರ್ತೆಯನ್ನೂ ನಿಯೋಜನೆ ಮಾಡಿತ್ತು.
ಸಮರ ಆರಂಭ: ಈಗ ಅಂಗನವಾಡಿ ಕಾರ್ಯಾಚರಿಸುತ್ತಿರುವ ಕಟ್ಟಡಕ್ಕೆ ತಮ್ಮ ಸಂಘದ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ಕೋರಿ ‘ನಮ್ಮೂರು- ನಮ್ಮವರು’ ಸಂಘವು ಮೆಸ್ಕಾಂಗೆ ಅರ್ಜಿ ಸಲ್ಲಿಸಿತ್ತು. ಆದರೆ ಇದಕ್ಕೆ ಆಕ್ಷೇಪ ಸಲ್ಲಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಈ ಜಾಗವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಂಜೂರುಗೊಂಡಿದ್ದು, ಆದ್ದರಿಂದ ಇಲ್ಲಿ ಬೇರೆ ಯಾವುದೇ ಕಾಮಗಾರಿ ನಡೆಯದಂತೆ ಕಾರ್ಯಪ್ರವೃತರಾಗಬೇಕು ಎಂದು ಪತ್ರದಲ್ಲಿ ತಿಳಿಸಿದ್ದರು. ಅಲ್ಲಿಂದ ಅಂಗನವಾಡಿ ಮತ್ತು ಸಂಘಟನೆಯ ಮಧ್ಯೆ ಸಮರ ಆರಂಭಗೊಂಡಿದ್ದು, ಈ ನಡುವೆ ಅಂಗನವಾಡಿಗೆ ರಜಾದಿನವಾದ ಡಿ.15ರಂದು ಅಂಗನವಾಡಿ ಕಾರ್ಯಾಚರಿಸುತ್ತಿದ್ದ ಕಟ್ಟಡದೊಳಗೆ ಬಾಗಿಲು ತೆಗೆದು ಕೆಲವರು ನುಗ್ಗಿದ್ದು, ಅಂಗನವಾಡಿಯ ಒಳಗಿರುವ ಕಪಾಟು, ಟೇಬಲ್ ಹಾಗೂ ಅಂಗನವಾಡಿಯ ಗೋಡೆಯ ಮೇಲೆ ‘ನಮ್ಮೂರು ನಮ್ಮವರು’ ಸಂಘಟನೆಯ ಸ್ಟಿಕ್ಕರ್ ಅಂಟಿಸಿಬಿಟ್ಟಿದ್ದಾರಲ್ಲದೆ, ಕಟ್ಟಡದೊಳಗೆ ಕ್ರಿಕೆಟ್ ಬ್ಯಾಟ್‌ಗಳನ್ನು ಇಟ್ಟು ತೆರಳಿದ್ದಾರೆ. ಇವರಿಗೆ ಅಂಗನವಾಡಿಯ ಬಾಗಿಲು ತೆರೆಯಲು ಕೀ ಸಿಕ್ಕಿದ್ದಾರೂ ಹೇಗೆ ಎಂಬ ಬಗ್ಗೆಯೂ ಶಂಕೆ ಮೂಡಿದೆ.
ಒಟ್ಟಿನಲ್ಲಿ ಮೈಂದಡ್ಕ ಅಂಗನವಾಡಿ ಕಟ್ಟಡವು ಈಗ ಗೊಂದಲದ ಗೂಡಾಗಿದ್ದು, ಅಧಿಕಾರಿ ವರ್ಗ ಮಧ್ಯ ಪ್ರವೇಶಿಸಿ ಇಲ್ಲಿನ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕಿದೆ.
"ಮೈಂದಡ್ಕದಲ್ಲಿರುವ ಕಟ್ಟಡದಲ್ಲಿ ಈಗ ಅಂಗನವಾಡಿ ನಡೆಯುತ್ತಿರುವ ಸ್ಥಳವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಂಜೂರುಗೊಳಿಸಲಾಗಿದೆ. ಇದರಲ್ಲಿ ಈ ಕಟ್ಟಡವೂ ಸೇರುತ್ತದೆ. ನಮ್ಮೂರು- ನಮ್ಮವರು ಸಂಘದವರು ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈವರೆಗೆ ಅವರಿಗೆ ನಿವೇಶನ ಮಂಜೂರುಗೊಂಡಿಲ್ಲ". -ಚಂದ್ರ ನಾಯ್ಕ, ಕಂದಾಯ ನಿರೀಕ್ಷಕ, ಉಪ್ಪಿನಂಗಡಿ ಹೋಬಳಿ
"ಈ ಜಾಗ ನಮ್ಮ ಸಂಘಟನೆಯದ್ದು, ಈ ಕಟ್ಡಡವೂ ನಮ್ಮದು, ತಾತ್ಕಾಲಿಕವಾಗಿ ಅಂಗನವಾಡಿಗೆ ಕೊಟ್ಟಿದ್ದೇವೆ" -ಪುರುಷೋತ್ತಮ, ಅಧ್ಯಕ್ಷ, ನಮ್ಮೂರು-ನಮ್ಮವರು, ನೆಕ್ಕಿಲಾಡಿ
"ಅಲ್ಲಿ ನಡೆದಿರುವ ಘಟನೆ ಬಗ್ಗೆ ಮಾಹಿತಿ ಬಂದಿದೆ. ನಾನು ಮಂಗಳೂರಿನಲ್ಲಿ ತರಬೇತಿಯಲ್ಲಿ ಇದ್ದೇನೆ. ಘಟನೆ ಸಲುವಾಗಿ ಪೊಲೀಸ್ ದೂರು ನೀಡಲು ಮೇಲ್ವಿಚಾರಕರಿಗೆ ಸೂಚನೆ ನೀಡಿದ್ದೇನೆ". -ಮಂಗಳಾ ಕೆ. ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಪುತ್ತೂರು