ಮಂಗಳೂರು-ಗೋವಾ ನಡುವೆ ವಂದೇ ಭಾರತ್ ರೈಲು : ಸಂಸದ ನಳಿನ್ ಕುಮಾರ್ ಕಟೀಲ್
ಮಂಗಳೂರು, ಆ.6: ಮಂಗಳೂರು-ಬೆಂಗಳೂರು ನಡುವಿನ 90 ಕಿ.ಮೀ ಉದ್ದದ ರೈಲು ಮಾರ್ಗದ ವಿದ್ಯುದ್ದೀಕರಣದ ಬಾಕಿ ಕಾಮಗಾರಿ ಪೂರ್ಣಗೊಂಡ ಬಳಿಕ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚರಿಸುವುದು ಸಾಕಾರಗೊಳ್ಳಲಿದೆ. ಇದಕ್ಕೂ ಮೊದಲು ಮಂಗಳೂರು-ಗೋವಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭಿಸುವುದಾಗಿ ರೈಲ್ವೆ ಸಚಿವರು ಭರವಸೆ ನೀಡಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಪುನರ್ ಅಭಿವೃದ್ಧಿಗೆ ರವಿವಾರ ನಡೆದ ಶಂಕುಸ್ಥಾಪನಾ ಸಮಾರಂಭವನ್ನು ಉದ್ಘಾಟಿ ಮಾತನಾಡಿದ ಅವರು ತಿರುವನಂತಪುರ -ಕಾಸರಗೋಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರಿಗೆ ವಿಸ್ತರಣೆಗೆ ಮನವಿ ಮಾಡಲಾಗಿದೆ . ಕಳೆದ 9 ವರ್ಷಗಳಲ್ಲಿ ರೈಲ್ವೇ ಇಲಾಖೆಯ ಅಭಿವೃದ್ಧಿ ಕಾಮಗಾರಿ ಗಳಿಗೆ ಮಂಗಳೂರಿಗೆ ಅತಿ ಹೆಚ್ವು ಅನುದಾನ ಬಂದಿದೆ ಎಂದರು.
ಅಮೃತ್ ಭಾರತ್ ರೈಲ್ವೆ ಅಭಿವೃದ್ಧಿ ಯೋಜನೆ(ಎಬಿಎಸ್‌ಎಸ್) ಅಡಿಯಲ್ಲಿ ಭಾರತದಾದ್ಯಂತ 508 ರೈಲು ನಿಲ್ದಾಣಗಳ ಉನ್ನತೀಕರಣದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.
ಮುಂದಿನ ಒಂದು ವರ್ಷದಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳಲಿದೆ . ಬಂಟ್ವಾಳ ರೈಲು ನಿಲ್ದಾಣದ ಅಭಿವೃದ್ಧಿಗೆ 26.18 ಕೋಟಿ ರೂ.ಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ .ಸುಬ್ರಹ್ಮಣ್ಯದ ರೈಲು ನಿಲ್ದಾಣವನ್ನು ಈ ಯೋಜನೆಯಲ್ಲಿ 23.73 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು. ಎಂದರು.
ಮಾಜಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರೈಲ್ವೆ ಯೋಜನೆಗಳಿಗೆ 50: 50 ವೆಚ್ಚ ಹಂಚಿಕೆಗೆ ಒಪ್ಪಿಗೆ ನೀಡುವುದರೊಂದಿಗೆ, ಕರ್ನಾಟಕದಲ್ಲಿ ಹಲವಾರು ರೈಲ್ವೆಯ ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಯಿತು ಎಂದು ಹೇಳಿದರು.
ದಕ್ಷಿಣ ಕನ್ನಡದ ಜನತೆಯ ಬೇಡಿಕೆಯಂತೆ ಮಂಗಳೂರಿಗೆ ಹೆಚ್ಚಿನ ರೈಲುಗಳಿಗಾಗಿ ರೈಲ್ವೆ ಸಚಿವರಿಗೆ ಮನವಿ ಮಾಡಲಾ ಗಿದೆ. ಗೂಡ್ಸ್ ಶೆಡ್ ಅನ್ನು ಉಳ್ಳಾಲಕ್ಕೆ ಸ್ಥಳಾಂತರಿಸುವ ಪ್ರಯತ್ನ ಪ್ರಗತಿಯಲ್ಲಿದೆ. ರೈಲ್ವೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆ ಗಳನ್ನು ಶೀಘ್ರವಾಗಿ ಪರಿಹರಿಸಲಾಗುವುದು. 2014ರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 50,000 ಕೋಟಿ ರೂ. ಹಣ ದಕ್ಷಿಣ ಕನ್ನಡಕ್ಕೆ ಕೇಂದ್ರ ಸರಕಾರದಿಂದ ದೊರೆತಿದೆ ಎಂದು ಸಂಸದರು ತಿಳಿಸಿದರು.
ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ , ಸುಳ್ಯ ಶಾಸಕಿ ಭಾಗೀರಥಿ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪ್ ಸಿಂಹ ನಾಯಕ್ ,ಮಂಗಳೂರು ಮನಪಾ ಮೇಯರ್ ಜಯಾನಂದ ಅಂಚನ್,ಉಪ ಮೇಯರ್ ಪೂರ್ಣಿಮಾ, ಸ್ಥಳೀಯ ಸದಸ್ಯೆ ಶೋಭಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ರೈಲ್ವೇ ಮುಖ್ಯ ಕಾರ್ಯನಿರ್ವಾಹಕಾ ಇಂಜಿನಿಯರ್ ರಾಜಗೋಪಾಲ್ ಸ್ವಾಗತಿಸಿದರು.