ತಂತ್ರಜ್ಞಾನ ಬಳಸಿ ಹೊಸ ಜನಗಣತಿಗೆ ವೀರಶೈವ- ಲಿಂಗಾಯತ ಮಹಾಸಭಾ ಒತ್ತಾಯ
ಮಂಗಳೂರು, ಡಿ. 18: ರಾಜ್ಯ ಸರಕಾರ ತಂತ್ರಜ್ಞಾನ ಬಳಸಿಕೊಂಡು, ಹಿಂದಿನ ಗಣತಿಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲಿ ಎಂದು ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ದ.ಕ. ಜಿಲ್ಲಾ ಘಟಕ ಒತ್ತಾಯಿಸಿದೆ.
ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಈ ಬಗ್ಗೆ ಮಾತನಾಡಿದ ಅಖಿಲ ಭಾರತ ವೀರಶೈವ- ಲಿಂಗಾಯತ 24ನೇ ಅಧಿವೇಶನದ ದ.ಕ. ಜಿಲ್ಲಾ ಉಸ್ತುವಾರಿ ಉಮೇಶ್ ಪಾಟೀಲ್, ಸುಮಾರು 8 ವರ್ಷಗಳಷ್ಟು ಹಳೆಯದಾದ ಹಾಗೂ ಅನೇಕ ಲೋಪದೋಷಗಳಿಂದ ಕೂಡಿರುವ ಹಾಗೂ ಬಿಡುಗಡೆಗೆ ಮುನ್ನವೇ ಬಹಿರಂಗಗೊಂಡಿರುವ ಕಾಂತರಾಜು ಆಯೋಗದ ವರದಿಯನ್ನು ತಿರಸ್ಕರಿಸುವುದು ಹಾಗೂ ಈ ವರದಿಯನ್ನು ರಾಜ್ಯ ಸರಕಾರ ಸ್ವೀಕರಿಸದಂತೆ ಅಧಿವೇಶನದಲ್ಲಿ ಒತ್ತಾಯಿಸಲಾಗುವುದು ಎಂದರು.
ಡಿ.23 ಮತ್ತು 24ರಂದು ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ಮಹಾಸಭೆಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಅಧಿವೇಶನ ನಡೆಯಲಿದೆ. ಎರಡು ದಿನಗಳ ಸಮಾವೇಶದಲ್ಲಿ ವಿವಿಧ ಗೋಷ್ಠಿಗಳು, ವಸ್ತು ಪ್ರದರ್ಶನ ಹಾಗೂ ಪುಸ್ತಕ ಪ್ರದರ್ಶನವೂ ಇರಲಿದೆ. ಅಧಿವೇಶನದಲ್ಲಿ ವೀರಶೈವ- ಲಿಂಗಾಯ ಸಮುದಾಯವನ್ನು ಕೇಂದ್ರ ಹಿಂದುಳಿದ ವರ್ಗಗಳ (ಓಬಿಸಿ) ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
165 ಕೋಟಿ ರೂ. ವೆಚ್ಚದಲ್ಲಿ ಮಾಡಲಾದ ಕಾಂತರಾಜು ಆಯೋಗದ ವರದಿಯ ಪ್ರಕಾರ ನಮ್ಮ ಜನಸಂಖ್ಯೆ 60 ಸಾವಿರದಷ್ಟು ಎಂದು ಅಂದಾಜಿಸಲಾಗಿದೆ. ಆದರೆ ಸುಮಾರು 1.50 ಕೋಟಿಯಿಂದ 2 ಕೋಟಿಯಷ್ಟು ಸಮುದಾಯದ ಜನಸಂಖ್ಯೆ ಇದೆ. ದ.ಕ. ಜಿಲ್ಲೆಯಲ್ಲಿ ನಮ್ಮನ್ನೂ ಸೇರಿ ನಮ್ಮ ಸಮುದಾಯದ ಯಾವುದೇ ಮನೆಗೆ ಭೇಟಿ ನೀಡದೆ ವರದಿ ತಯಾರಾಗಿದೆ ಎಂದು ದ.ಕ. ಜಿಲ್ಲಾ ಅಧ್ಯಕ್ಷ ತೋಟೇಗೌಡ ಆಕ್ಷೇಪಿಸಿದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಸೊಂಡೂರು, ದ.ಕ. ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಜಗದೀಶ್ ವೈ., ನಿರ್ಮಲಾ, ಕಾರ್ಯದರ್ಶಿ ಈರಣ್ಣ, ಕರವಳಿ ವೀರಶೈವ- ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಚೆನ್ನಬಸಪ್ಪ ರೊಟ್ಟಿ, ಉಪಾಧ್ಯಕ್ಷ ಆರ್.ಎಂ. ಬಸವರಾಜು ಉಪಸ್ಥಿತರಿದ್ದರು.