ವಿನಾಯಕ ಬಾಳಿಗಾ ಹತ್ಯೆ ಪ್ರಕರಣ: ನ.27ರಂದು ವಿಚಾರಣೆ
ಮಂಗಳೂರು, ನ.26: ಏಳು ವರ್ಷಗಳ ಹಿಂದೆ ನಗರದಲ್ಲಿ ನಡೆದ ಮಾಹಿತಿ ಹಕ್ಕು ಹಾಗೂ ಬಿಜೆಪಿ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ವಿಚಾರಣೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ.27 ಮತ್ತು 28ರಂದು ನಡೆಯಲಿದೆ.
ವಿನಾಯಕ ಬಾಳಿಗಾ ಕೊಲೆ ಪ್ರಕರಣ ಈ ವರ್ಷ ಎರಡನೇ ಬಾರಿ ನಡೆಯುತ್ತದೆ. ಕಳೆದ ಜನವರಿ 3 ಮತ್ತು 4ರಂದು ಮೊದಲ ಹಂತದ ಸಾಕ್ಷಿದಾರರ ವಿಚಾರಣೆ ನಡೆದಿತ್ತು.
2016ರ ಮಾರ್ಚ್ 21ರಂದು ವಿನಾಯಕ ಬಾಳಿಗಾರನ್ನು ಮಾರಕಾಸ್ತ್ರದಿಂದ ಕೊಲೆ ಮಾಡಲಾಗಿತ್ತು.
ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅವರ ಸಹೋದರಿ ಅನುರಾಧಾ ಬಾಳಿಗಾ ನೀಡಿದ ದೂರಿನಂತೆ ನಮೋ ಬ್ರಿಗೇಡ್‌ನ ಮುಖ್ಯಸ್ಥ ನರೇಶ್ ಶೆಣೈ, ಶ್ರೀಕಾಂತ್, ಶಿವಪ್ರಸಾದ್, ವಿನೀತ್ ಪೂಜಾರಿ, ನಿಶ್ಚಿತ್ ದೇವಾಡಿಗ, ಶೈಲೇಶ್ , ಮಂಜುನಾಥ್ ಶೆಣೈ, ವಿಘ್ನೇಶ್ ನಾಯಕ್ ಎಂಬವರ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ ಆರೋಪಿಗಳು ಜಾಮೀನು ಮೂಲಕ ಹೊರಬಂದಿದ್ದರು.
ಆರೋಪಿಗಳ ಪೈಕಿ ವಿಘ್ನೇಶ್ ನಾಯಕ್ ಎಂಬಾತನ ಮೃತದೇಹ 2020ರ ನವೆಂಬರ್‌ನಲ್ಲಿ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರದಿಂದ ಬೆಂಗಳೂರಿನ ಹಿರಿಯ ನ್ಯಾಯವಾದಿ ಎಸ್.ಬಾಲಕೃಷ್ಣನ್ ಅವರನ್ನು ಸರಕಾರಿ ವಿಶೇಷ ಅಭಿಯೋಜಕರನ್ನಾಗಿ ನೇಮಕ ಮಾಡಲಾಗಿತ್ತು.
ಅದರಂತೆ ಕಳೆದ ಜನವರಿಯಲ್ಲಿ ಎರಡು ದಿನಗಳ ನಡೆದ ವಿಚಾರಣೆಯಲ್ಲಿ 11 ಮಂದಿ ಸಾಕ್ಷಿದಾರರ ಹೇಳಿಕೆಯನ್ನು ಪಡೆಯಲಾಗಿತ್ತು. ನ.27 ಮತ್ತು 28ರಂದು ಒಟ್ಟು 14ಮಂದಿಯ ವಿಚಾರಣೆ ನಡೆಸಿ ಅವರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಲಿದೆ ಎಂದು ತಿಳಿದು ಬಂದಿದೆ.