ದಲಿತ ಮಹಿಳೆಗೆ ದೌರ್ಜನ್ಯ; ಆರೋಪಿಗಳನ್ನು ಬಂಧಿಸದಿದ್ದಲ್ಲಿ ಡಿವೈಎಸ್‍ಪಿ ಕಚೇರಿ ಮುಂಭಾಗ ಧರಣಿ-ಆನಂದ ಬೆಳ್ಳಾರೆ
ಪುತ್ತೂರು; ಕಡಬ ತಾಲೂಕಿನ ಪುಣ್ಚಪ್ಪಾಡಿ ಎಂಬಲ್ಲಿ ದಲಿತ ಕುಟುಂಬಕ್ಕೆ ಸೇರಿದ ಮಹಿಳೆಯೊಬ್ಬರ ಮೇಲೆ ವೆಂಕಟ್ರಮಣ ಭಟ್ ಹಾಗೂ ಅವರ ಮಗ ನರೇಶ್ ಭಟ್ ಎಂಬವರು ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿ ಮಾನಭಂಗ ಪ್ರಯತ್ನ ನಡೆಸಿದ್ದು, ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕು. ಮುಂದಿನ 15 ದಿನಗಳೊಳಗೆ ಪುತ್ತೂರು ಡಿವೈಎಸ್ಪಿ ಕಚೇರಿ ಮುಂಭಾಗ ಧರಣಿ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಎಚ್ಚರಿಕೆ ನೀಡಿದ್ದಾರೆ.
ಪುತ್ತೂರು ಪತ್ರಿಕಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಪುಣ್ಚಪ್ಪಾಡಿಯ ನಾಗರತ್ನಮ್ಮ ಎಂಬವರಿಗೆ ಸೇರಿದ ಸ್ಥಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದಲಿತ ಸಮುದಾಯಕ್ಕೆ ಸೇರಿದ ಮಡಿಕೇರಿಯ ಕರಿಕೆ ನಿವಾಸಿ ಪುಷ್ಪಾ ಎಂಬವರ ಮೇಲೆ ಈ ಆರೋಪಿಗಳು ಜಾತಿ ನಿಂದನೆ ಮಾಡಿ, ಜೀವ ಬೆದಿರಕೆ ಒಡ್ಡಿ, ದೈಹಿಕ ಹಲ್ಲೆ ನಡೆಸಿದ್ದರು. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಆ.18ರಂದು ಪ್ರಕರಣ ದಾಖಲಾಗಿದೆ. ಪೊಲೀಸರು ದೂರು ಸ್ವೀಕರಿಸಿದ್ದರೂ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಅವರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂತ್ರಸ್ತೆ ಪುಷ್ಪಾ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಅಚ್ಯುತ ಮಲ್ಕಜೆ, ದಲಿತ ಮುಖಂಡ ಅಭಿಷೇಕ್ ಬೆಳ್ಳಿಪ್ಪಾಡಿ ಹಾಗೂ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಇದ್ದರು.