ಕೋಟಿ-ಚೆನ್ನಯರನ್ನು ದೇಶಕ್ಕೆ ಗುರುತಿಸಿದ ಖ್ಯಾತಿ ವಿಶುಕುಮಾರ್ ಅವರದ್ದು: ವೀರಪ್ಪ ಮೊಯ್ಲಿ
ಸಾಹಿತಿ ಬಾಬು ಶಿವ ಪೂಜಾರಿಗೆ ವಿಶುಕುಮಾರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಮಂಗಳೂರು, ನ.10: ತುಳುನಾಡಿನ ವೀರಪುರುಷರಾದ ಕೋಟಿ-ಚೆನ್ನಯರನ್ನು ನಾಟಕದ ಮೂಲಕ ದೇಶ ಗುರುತಿಸುವಂತೆ ಮಾಡಿದ ಖ್ಯಾತಿ ಹಿರಿಯ ಸಾಹಿತಿ, ನಾಟಕಕಾರ, ಪತ್ರಕರ್ತ ವಿಶುಕುಮಾರ್ಅವರದ್ದು ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಅಭಿಪ್ರಾಯಿಸಿದ್ದಾರೆ.
ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಹಾಗೂ ವಿಶುಕುಮಾರ್ ದತ್ತಿನಿಧಿ ಸಮಿತಿ ವತಿಯಿಂದ ಹಾಗೂ ಯುವವಾಹಿನಿ ಪಣಂಬೂರು - ಕುಳಾಯಿ ಘಟಕದ ಅತಿಥ್ಯದಲ್ಲಿ ಉರ್ವಾಸ್ಟೋರ್ ನ ತುಳು ಭವನದ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ರವಿವಾರ 2024ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಾಹಿತ್ಯ, ನಾಟಕ ಕ್ಷೇತ್ರದ ಧೀಮಂತರಾಗಿ, ಮಿನುಗು ನಕ್ಷತ್ರರಾಗಿ, ದಂತಕತೆಯಾಗಿದ್ದ ವಿಶು ಕುಮಾರ್ ಅನೇಕ ಪ್ರತಿಭಾವಂತರನ್ನು ಸೃಷ್ಟಿಸಿದ ಮಾನವ ಶಿಲ್ಪಿ. ತಮ್ಮ ಜೀವಿತಾವಧಿಯಲ್ಲಿ ಅವರು ತಮ್ಮ ನಾಟಕಗಳ ಮೂಲಕ ರಾಜಕಾರಣಿಗಳನ್ನೂ ಟೀಕಿಸುತ್ತಿದ್ದರು. ನಾವು ರಾಜಕೀಯಕ್ಕೆ ಬರುವಲ್ಲೂ ವಿಶುಕುಮಾರ್ ಅವರ ಪ್ರೇರೇಪಣೆ ಇದೆ ಎಂದು ಮೊಯ್ಲಿ ನೆನಪಿಸಿಕೊಂಡರು.
ತುಳು ಭಾಷೆಯ ಪರಂಪರೆಯ ಬಗ್ಗೆ ಪ್ರಸ್ತಾವಿಸಿದ ವೀರಪ್ಪ ಮೊಯ್ಲಿ, ಸ್ವತಂತ್ರ ಲಿಪಿಯನ್ನು ಹೊಂದಿರುವ ತುಳು ಭಾಷೆಯ ಅಭಿವೃದ್ಧಿಗೆ ತುಳು ಅಕಾಡಮಿಯು ಕಂಕಣಬದ್ಧವಾಗಬೇಕು ಎಂದು ಕರೆ ನೀಡಿದರು.
ಮಣ್ಣಿನ ಮೃದುತ್ವ ಗುಣವನ್ನು ಹೊಂದಿರುವ ತುಳು ಭಾಷೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ತುಳು ಭಾಷೆಯಲ್ಲಿ ಸಂವಹನ ಕಾರ್ಯ ಆಗಬೇಕು. ವಿಶುಕುಮಾರ್ ತಮ್ಮ ಅವಧಿಯಲ್ಲಿ ಈ ಕಾರ್ಯವನ್ನು ಮಾಡಿದ್ದು, ಎತ್ತಲೋ ಸಾಗುತ್ತಿರುವ ಯುವ ಮನಸ್ಸುಗಳನ್ನು ಒಗ್ಗೂಡಿಸಿ ತುಳು ಸಂಸ್ಕೃತಿಯ ಭಾತೃತ್ವ ಗುಣವನ್ನು ಉಳಿಸಿಕೊಂಡು ಮೂಢನಂಬಿಕೆ, ಜಾತೀಯತೆಯಿಂದ ದೂರವಾಗುವ ನಿಟ್ಟಿನಲ್ಲಿ ಯುವವಾಹಿನಿಯಂತಹ ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ವಿಶುಕುಮಾರ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, 17-18ನೆ ಶತಮಾನದಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬರು ದ.ಕ. ಜಿಲ್ಲೆಯಲ್ಲಿ 16 ಕೈಫಿಯತ್ತುಗಳನ್ನು ರಚಿಸಿದ್ದರು. ಅದರಲ್ಲಿ ಎಂಟು ಉಡುಪಿ ಅಷ್ಟಮಠಗಳ ಬಗ್ಗೆ ಇದ್ದರೆ ಉಳಿದವುಗಳು ಕೂಡಾ ವೈದಿಕ ಕೇಂದ್ರೀಕೃತವಾದವುಗಳು. ಆದರೆ ತುಳುನಾಡಿನ ತಳ ಸಮುದಾಯಗಳ ಇತಿಹಾಸ, ಇಲ್ಲಿನ ಗರಡಿಗಳು, ಬಿಲ್ಲವರ, ಒಕ್ಕಲಿಗರು, ಇಲ್ಲಿನ ಕಂಬಳ, ಭೂತಾರಾಧನೆ, ಯಕ್ಷಗಾನದ ಬಗ್ಗೆ ಕೈಫಿಯತ್ತುಗಳು ರಚನೆಯಾಗಿಲ್ಲ. ಇದಕ್ಕೆ ಕಾರಣ ಅಂದಿನ ಆ ಬ್ರಿಟಿಷ್ ಅಧಿಕಾರಿಗೆ ಸಹಾಯಕರಾಗಿದ್ದವರು ಇಲ್ಲಿನ ಮೇಲ್ವರ್ಗದ ಸಮುದಾಯ. ಈ ರೀತಿ ಏಕಪಕ್ಷೀಯವಾದ ಚರಿತ್ರೆ ಪರಿಪೂರ್ಣವಾಗದು. ಆದರೆ ವಿಶು ಕುಮಾರ್ ಮತ್ತು ಬಾಬು ಶಿವ ಪೂಜಾರಿಯವರು ಇದಕ್ಕಿಂತ ಭಿನ್ನವಾಗಿ ತುಳುನಾಡನ್ನು ಚಿತ್ರಿಸಿದ ರೀತಿ ವಿಶೇಷವಾಗಿದೆ. ಸಾಹಿತಿ ಬರೆಯುವುದು ಇತಿಹಾಸವಲ್ಲ. ಅದು ಕಾದಂಬರಿ ಆದರೆ ಕವಿ ಮತ್ತು ಸಾಹಿತಿಗಳು ತಮ್ಮ ಭಾಷೆಯಲ್ಲಿ ಹೊಸತನವನ್ನು ಕಟ್ಟುತ್ತಾರೆ. ಸಾಂಸ್ಕೃತಿಕ ಅನನ್ಯತೆಯನ್ನು ಪ್ರತಿಬಿಂಬಿಸುತ್ತಾರೆ ಎಂದು ವಿಶುಕುಮಾರ್ ಹಾಗೂ ಬಾಬು ಶಿವ ಪೂಜಾರಿ ಬಗ್ಗೆ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಪ್ರಭಾಕರ್ ನೀರುಮಾರ್ಗ ಯುವವಾಹಿನಿ ಯುವ ಸಾಹಿತಿ ಪ್ರಶಸ್ತಿಯನ್ನು ಉದಯೋನ್ಮುಖ ಬರಹಗಾರ್ತಿ ರಾಜಶ್ರೀ ಜೆ. ಪೂಜಾರಿಗೆ ಪ್ರದಾನ ಮಾಡಲಾಯಿತು.
ಮಂಗಳೂರಿನಲ್ಲಿ ವಿಶುಕುಮಾರ್ ಸ್ಮರಣಾರ್ಥ ಭವನ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಯುವವಾಹಿನಿಯಿಂದ ಮನವಿ ಪತ್ರವನ್ನು ವೀರಪ್ಪ ಮೊಯ್ಲಿ ಹಾಗೂ ಡಾ.ಪುರುಷೋತ್ತಮ ಬಿಳಿಮಲೆ ಅವರ ಮೂಲಕ ಮುಖ್ಯಮಂತ್ರಿಯವರಿಗೆ ಈ ಸಂದರ್ಭ ಸಲ್ಲಿಸಲಾಯಿತು.
ಮಂಗಳೂರು ವಿವಿ ಉಪಕುಲಪತಿ ಪ್ರೊ. ಪಿ.ಎಲ್. ಧರ್ಮ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ತಾರನಾಥ ಗಟ್ಟಿ, ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್.,ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ. ಪೂಜಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ., ಯುವವಾಹಿನಿ ಪಣಂಬೂರು- ಕುಳಾಯಿ ಘಟಕದ ಅಧ್ಯಕ್ಷೆ ಮನೀಷಾ ರೂಪೇಶ್, ಕಾರ್ಯದರ್ಶಿ ಸಚಿನ್ ಜಿ. ಅಮೀನ್, ವಿಶುಕುಮಾರ್ ದತ್ತಿನಿಧಿ ಸಮಿತಿ ಸಂಚಾಲಕ ಸುರೇಶ್ ಪೂಜಾರಿ, ಕಾರ್ಯದರ್ಶಿ ಸಚ್ಚೇಂದ್ರ ಅಂಬಾಗಿಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಟಿ. ಶಂಕರ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಮಿತೇಶ್ ಬಾರ್ಯ ಮತ್ತು ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.
ಸಾಹಿತಿ, ಸಂಶೋಧಕ ಬಾಬು ಶಿವ ಪೂಜಾರಿಗೆ 2024ನೆ ಸಾಲಿನ ವಿಶುಕುಮಾರ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಇಂದು ಕರಾವಳಿ ಜಿಲ್ಲೆಗಳನ್ನು ತಲ್ಲಣಗೊಳಿಸಿರುವ ಮಾದಕ ವ್ಯಸನ, ಸಮಾಜದ್ರೋಹಿ ಚಟುವಟಿಕೆಗಳ ಬಗ್ಗೆ ಮಾತನಾಡುವ, ಬರೆಯುವ ಧೈರ್ಯ ತೋರಿದರೆ ಮಾತ್ರ ವಿಶುಕುಮಾರ್ ಗೆ ನಾವು ನೀಡುವ ಗೌರವವಾಗಿರುತ್ತದೆ. ವಿಶುಕುಮಾರ್ ತಮ್ಮ ಪತ್ರಿಕೆಯ ಮೂಲಕ ಕರಾವಳಿಯಲ್ಲಿ ಆ ಕಾಲದಲ್ಲಿ ಅವ್ಯಾಹತವಾಗಿದ್ದ ಕಳ್ಳ ಸಾಗಣೆ ಕುರಿತು ದಿಟ್ಟವಾಗಿ ಬರೆಯುವ ಧೈರ್ಯ ತೋರಿದವರು. ಆದರೆ ಕಳೆದ ಕೊರೋನ ಅವಧಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ಬೆರಳಣಿಕೆಯ ಜನ ಬರೆದಿದ್ದು ಬಿಟ್ಟರೆ, ಯಾವ ಕೃತಿಗಳೂ ಈ ಬಗ್ಗೆ ಪ್ರಕಟವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.