ವಿಟ್ಲ | ದಂಪತಿಗೆ ಜೀವ ಬೆದರಿಕೆ: ಸಂಘ ಪರಿವಾರದ ಮುಖಂಡ ಮುರಳೀಕೃಷ್ಣ ಹಸಂತಡ್ಕ ವಿರುದ್ಧ ಎಫ್ ಐಆರ್

ಮುರಳೀಕೃಷ್ಣ ಹಸಂತಡ್ಕ
ವಿಟ್ಲ: ದಂಪತಿಗೆ ತಲವಾರು ತೋರಿಸಿ ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಣಚ ನಿವಾಸಿ ಹರೀಶ್ ಎನ್. ಎಂಬವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ಎಪ್ರಿಲ್ 16 ರಂದು ಮನೆಯಲ್ಲಿ ತನ್ನ ಪತ್ನಿ ಶ್ರೀದೇವಿ ಒಬ್ಬರೇ ಇದ್ದ ವೇಳೆ ಬಂದಿದ್ದ ಮುರಳೀಕೃಷ್ಣ ಹಸಂತಡ್ಕ, "ನಿನ್ನ ಗಂಡನಲ್ಲಿ ಸಾರಡ್ಕದ ಪೆಟ್ರೋಲ್ ಬಂಕ್ ವ್ಯವಹಾರವನ್ನು ಬಿಟ್ಟು ಕೊಡುವಂತೆ ಹೇಳು" ಎಂದು ಬೆದರಿಕೆಯೊಡ್ಡಿದ್ದಾನೆ. ಅಲ್ಲದೇ, ಎಪ್ರಿಲ್ 19ರಂದು ಮತ್ತೊಮ್ಮೆ ತಲವಾರು ತೋರಿಸಿ ತಹರೀಶ್ ಹಾಗೂ ಶ್ರೀದೇವಿ ದಂಪತಿಗೆ ಬೆದರಿಕೆಯೊಡ್ಡಿದ್ದಾಗಿ ಆರೋಪಿಸಲಾಗಿದೆ.
ಈ ಕುರಿತು ನ್ಯಾಯಾಲಯದ ಆದೇಶದಂತೆ ವಿಟ್ಲ ಠಾಣೆಯಲ್ಲಿ ಮುರಳೀಕೃಷ್ಣ ಹಸಂತಡ್ಕ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಹರೀಶ್ ಪತ್ನಿ ಶ್ರೀದೇವಿ ಹಾಗೂ ಮುರಳೀಕೃಷ್ಣ ಹಸಂತಡ್ಕ ಸಾರಡ್ಕದ ಎಚ್.ಪಿ. ಪೆಟ್ರೋಲ್ ಬಂಕ್ ನನಲ್ಲಿ ಪಾಲುದಾರಿಕೆ ಹೊಂದಿದ್ದು, ಇದೇ ವಿಚಾರವಾಗಿ ಬೆದರಿಕೆಯೊಡ್ಡಿರುವುದಾಗಿ ತಿಳಿದುಬಂದಿದೆ.