ಪಾಂಡೇಶ್ವರ ವೆಟ್‌ವೆಲ್‌ಗೆ ತ್ಯಾಜ್ಯ ನೀರು ವಿವಾದ: ಮೇಯರ್ ನೇತೃತ್ವದಲ್ಲಿ ಸಭೆ
ಮಂಗಳೂರು: ಪಾಂಡೇಶ್ವರ ವೆಟ್‌ವೆಲ್‌ಗೆ ಅನಧಿಕೃತವಾಗಿ ತ್ಯಾಜ್ಯ ನೀರನ್ನು ಟ್ಯಾಂಕರ್ ಮೂಲಕ ಹರಿಸುತ್ತಿರುವ ವಿವಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲು ಮುಂದಾಗಿರುವ ಮಂಗಳೂರು ಮಹಾನಗರ ಪಾಲಿಕೆಯು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರ ನೇತೃತ್ವದಲ್ಲಿ ಮಂಗಳವಾರ ಪಾಲಿಕೆಯಲ್ಲಿ ತುರ್ತು ಸಭೆ ನಡೆಸಿ ಚರ್ಚಿಸಿತು.
ಪಾಂಡೇಶ್ವರ, ಕುದ್ರೋಳಿ, ಜಪ್ಪು, ಬಂಗ್ರಕೂಳೂರು, ತಡಂಬೈಲ್ ವೆಟ್‌ವೆಲ್‌ಗಳ ಪೂರ್ಣ ಕಾರ್ಯಾಚರಣೆಯ ಮೂಲಕ ಎಲ್ಲಾ ಕಡೆ ಸಮಾನವಾಗಿ ಅಧಿಕೃತ ವಾಹನಗಳನ್ನು ಸೂಕ್ತ ನಿಗಾ ವಹಿಸಿ ನಿರ್ವಹಣೆ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಪಾಂಡೇಶ್ವರ ವೆಟ್‌ವೆಲ್ ವ್ಯಾಪ್ತಿಯ ಜನಸಾಮಾನ್ಯರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ಪಾಲಿಕೆ ಪಾಂಡೇಶ್ವರ ವೆಟ್‌ವೆಲ್‌ನಲ್ಲಿದ್ದ ದಾಖಲೆಗಳ ಪ್ರಕಾರ 17 ವಾಹನಗಳು ಬಂದು ತ್ಯಾಜ್ಯ ನೀರು ಡಂಪ್ ಮಾಡಲು ಅನುಮತಿ ಇತ್ತು. ಆದರೆ, ಇದರ ಜತೆಗೆ ೯ ಅನಧಿಕೃತ ವಾಹನಗಳಿಂದಲೂ ಒಳಚರಂಡಿ ನೀರನ್ನು ಪಾಂಡೇಶ್ವರ ವೆಟ್‌ವೆಲ್‌ಗೆ ತರಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಮೂಲಕ ಇಲ್ಲಿ 26 ವಾಹನಗಳಿಂದ ತಂದ ತ್ಯಾಜ್ಯ ನೀರನ್ನು ಸುರಿಯುತ್ತಿರುವುದರಿಂದ ಒತ್ತಡ ಅಧಿಕವಾಗಿದೆ ಎಂಬ ಅಂಶ ಚರ್ಚೆಯಾಗಿದೆ.
ತತ್‌ಕ್ಷಣಕ್ಕೆ ಜಪ್ಪು ಕಡೆಕಾರ್‌ನಲ್ಲಿರುವ ವೆಟ್‌ವೆಲ್ ಅನ್ನು ಪೂರ್ಣವಾಗಿ ದುರಸ್ತಿ ಮಾಡಿಕೊಳ್ಳಬೇಕಾಗಿದೆ. ಬಳಿಕ 7 ತ್ಯಾಜ್ಯ ನೀರು ತುಂಬಿದ ಟ್ಯಾಂಕರ್‌ಗಳನ್ನು ಅಲ್ಲಿಯೇ ನಿರ್ವಹಣೆ ಮಾಡಬೇಕು. ಉಳಿದಂತೆ 7 ಟ್ಯಾಂಕರ್ ಪಾಂಡೇಶ್ವರ ವೆಟ್‌ವೆಲ್, ೭ ಟ್ಯಾಂಕ್ ಕುದ್ರೋಳಿ ವೆಟ್‌ವೆಲ್‌ನಲ್ಲಿ ನಿರ್ವಹಣೆ ಮಾಡಬೇಕು. ಉಳಿದ 5 ವಾಹನಗಳನ್ನು ಬಂಗ್ರಕೂಳೂರು ವೆಟ್‌ವೆಲ್‌ನಲ್ಲಿ ನಿರ್ವಹಣೆ ಮಾಡಬೇಕು. ಸುರತ್ಕಲ್ ಭಾಗದ ತಡಂಬೈಲ್‌ನಲ್ಲಿರುವ ವೆಟ್‌ವೆಲ್‌ಗೆ ಹೊಸ ಪಂಪ್ ಜೋಡಿಸಿ ಅಲ್ಲಿಗೆ ತ್ಯಾಜ್ಯ ನೀರು ತರಲು ಸಾಧ್ಯಾವಾಗುವ ಹಾಗೆ ವ್ಯವಸ್ಥೆ ಮಾಡುವಂತೆ ಮೇಯರ್ ಅಧಿಕಾರಿಗಳಿಗೆ ಸೂಚಿಸಿದರು. ಯಾವುದೇ ಕಾರಣಕ್ಕೂ ತ್ಯಾಜ್ಯ ನೀರನ್ನು ಚರಂಡಿಗೆ ಬಿಡಬಾರದು. ಅಂತಹ ಪ್ರಕರಣ ತಿಳಿದು ಬಂದರೆ ಅಂತಹ ವಾಹನದ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಮೇಯರ್ ಸುಧೀರ್ ಶೆಟ್ಟಿ ಮಾತನಾಡಿ, ಪ್ರತೀ ವೆಟ್‌ವೆಲ್‌ಗೆ ಸಿಸಿ ಕ್ಯಾಮರಾ ಅಳವಡಿಸಬೇಕು ಹಾಗೂ ಅದರ ನಿರ್ವಹಣೆ ಕೂಡ ಸರಿಯಾಗಿ ಮಾಡಬೇಕು. ಜತೆಗೆ ಪ್ರತೀ ಟ್ಯಾಂಕರ್‌ಗಳ ಚಲನವಲನದ ಬಗ್ಗೆ ನಿಗಾ ವಹಿಸಲು ವಾಹನಗಳಿಗೆ ಜಿಪಿಎಸ್ ಅಳವಡಿಸಬೇಕು. ಪಾಲಿಕೆಯಲ್ಲಿರುವ ಕಮಾಂಡ್ ಕಂಟ್ರೋಲ್ ಸೆಂಟರ್ ಮೂಲಕ ಇದನ್ನು ಅವಲೋಕಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತ್ಯಾಜ್ಯ ನೀರು ಸಾಗಾಟ ಮಾಡುವ ಟ್ಯಾಂಕರ್‌ನ ಮಾಲಕರು ಮಾತನಾಡಿ, ಪ್ರತೀ ವಾಹನಕ್ಕೆ ೫೦೦ ರೂ. ಪಾಲಿಕೆಗೆ ಪಾವತಿ ಮಾಡಬೇಕಿದೆ. ಇದು ದುಬಾರಿಯಾಗುತ್ತಿದೆ. ಇದನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು. ಮೇಯರ್ ಉತ್ತರಿಸಿ, ಟ್ಯಾಂಕರ್‌ಗಳ ಬಾಕಿ ಉಳಿಸಿರುವ ಎಲ್ಲಾ ಮೊತ್ತವನ್ನು ಪಾಲಿಕೆಗೆ ತತ್‌ಕ್ಷಣವೇ ಪಾವತಿ ಮಾಡಬೇಕು. ಜನರು-ಪರಿಸರಕ್ಕೆ ಸಮಸ್ಯೆ ಆಗುವ ಹಾಗೆ ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ 500 ರೂ. ಇರುವ ದರವನ್ನು ಕಡಿಮೆ ಮಾಡುವ ಬಗ್ಗೆ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಉಪಮೇಯರ್ ಸುನೀತಾ, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಕಾರ್ಪೊರೇಟರ್‌ಗಳಾದ ಅಬ್ದುಲ್ ಲತೀಫ್, ವೀಣಾಮಂಗಲ, ಜಯಶ್ರೀ ಕುಡ್ವ, ಸಂಗೀತಾ ಆರ್.ನಾಯಕ್, ಶ್ವೇತಾ ಪೂಜಾರಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.