ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ತ್ಯಾಜ್ಯಕ್ಕೆ ಸಿಗಲಿದೆ ಮುಕ್ತಿ?

ಮಂಗಳೂರು, ಮಾ. 5: ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ವ್ಯಾಪ್ತಿಯ ಬಯಲು ಕಸಾಲಯದಲ್ಲಿ ಬೆಂಕಿಯಿಂದ ಕಳೆದ ಕೆಲ ದಿನಗಳಿಂದ ಹೊಗೆಬರುವುದು ಮುಂದುವರಿದಿದೆ. ಈ ನಡುವೆ, ರಸ್ತೆಯಲ್ಲೇ ಕಲುಷಿತ ನೀರು ಕೂಡಾ ಹರಿಯುತ್ತಿದ್ದು, ಈ ಬಗ್ಗೆ ಜನಶಿಕ್ಷಣ ಟ್ರಸ್ಟ್ನ ಮನವಿಗೆ ಸ್ಪಂದಿಸಿರುವ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಮುಖರು ಸೂಕ್ತ ಕ್ರಮದ ಭರವಸೆ ನೀಡಿದ್ದು, ಶೀಘ್ರದಲ್ಲೇ ಮಂಗಳೂರು ವಿವಿ ಕ್ಯಾಂಪಸ್ ನ ಒಣ ಹಾಗೂ ದ್ರವತ್ಯಾಜ್ಯ ಸಮಸ್ಯೆಗೆ ಮುಕ್ತಿ ಸಿಗುವ ನಿರೀಕ್ಷೆ ಮೂಡಿದೆ.
ಸ್ವಚ್ಛ ಗ್ರಾಮದ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಜಿಲ್ಲಾದ್ಯಂತ ಆಂದೋಲನ ನಡೆಸುತ್ತಿರುವ ಜನಶಿಕ್ಷಣ ಟ್ರಸ್ಟ್, ಮಂಗಳೂರು ವಿವಿ ಕ್ಯಾಂಪಸ್ ನ ರಸ್ತೆ ಬದಿಯಲ್ಲೇ ತ್ಯಾಜ್ಯಕ್ಕೆ ಬೆಂಕಿ ಹಾಕುವುದು, ರಸ್ತೆಯಲ್ಲಿಯೇ ಕಲುಷಿತ ನೀರು ಹರಿಯುತ್ತಿರುವ ಕುರಿತು ಕ್ರಮ ಕೈಗೊಳ್ಳುವಂತೆ 2022ರಲ್ಲೇ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಸ್ಥಳೀಯ ಕೊಣಾಜೆ ಗ್ರಾಪಂಗೂ ಮನವಿ ಸಲ್ಲಿಸಿದೆ.
ಈ ಬಗ್ಗೆ 2024ರ ಎಪ್ರಿಲ್ನಲ್ಲಿ ಸ್ಪಂದನ ನೀಡಿ ಜಿಲ್ಲಾ ಸ್ವಚ್ಛತಾ ರಾಯಭಾರಿ ಎನ್. ಶೀನ ಶೆಟ್ಟಿಯವರಿಗೆ ಪತ್ರ ಬರೆದಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರು ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣದ ಪ್ರಸ್ತಾವದ ಬಗ್ಗೆ ವಿವಿಯ ಸಕ್ಷಮ ಪ್ರಾಧಿಕಾರ ಸಮಿತಿಗಳ ಸಭೆಯಲ್ಲಿ ಚರ್ಚಿಸಿ ಕ್ರಮ ವಹಿಸುವುದಾಗಿ ಆಶ್ವಾಸನೆಯನ್ನೂ ನೀಡಿದ್ದರು.
ಆದರೆ ಕಳೆದ ನಾಲ್ಕು ದಿನಗಳಿಂದ ದಿನಗಳಿಂದೀಚೆಗೆ ವಿವಿ ಕ್ಯಾಂಪಸ್ ನಿಂದ ಮುಡಿಪು ಹೋಗುವ ರಸ್ತೆ ಬದಿಯಲ್ಲಿ ತ್ಯಾಜ್ಯಕ್ಕೆ ಹಾಕಲಾಗಿರುವ ಬೆಂಕಿಯಿಂದ ಹೊಗೆಯು ಸ್ಥಳೀಯವಾಗಿ ವಿಷಾನಿಲವನ್ನು ಹರಡುತ್ತಿದೆ. ರಸ್ತೆಯಲ್ಲೇ ಹರಿಯುತ್ತಿರುವ ಕಲುಷಿತ ನೀರಿನಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಮಾಜಿ ಒಂಬುಡ್ಸ್ ಮೆನ್ ಕೂಡಾ ಆಗಿರುವ ಶೀನ ಶೆಟ್ಟಿ ಸ್ಥಳೀಯ ಪಂಚಾಯತ್ ಹಾಗೂ ವಿಶ್ವವಿದ್ಯಾನಿಲಯದ ಗಮನವನ್ನು ಮತ್ತೆ ಸೆಳೆದಿದ್ದರು.
ಇದಕ್ಕೆ ಸ್ಪಂದಿಸಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಪಿ.ಎಲ್. ಧರ್ಮ ಮಂಗಳವಾರ ವಿವಿ ಕಚೇರಿಯಲ್ಲಿ ತಮ್ಮ ಹಿರಿಯ ಅಧಿಕಾರಿಗಳು, ಸ್ಥಳೀಯ ಪಂಚಾಯತ್ ಅಧ್ಯಕ್ಷರನ್ನು ಒಳಗೊಂಡು ಜಿಲ್ಲಾ ಸ್ವಚ್ಛತಾ ರಾಯಭಾರಿ ಎನ್. ಶೀನ ಶೆಟ್ಟಿಯವರ ತಂಡದ ಜತೆ ಸುದೀರ್ಘವಾಗಿ ಚರ್ಚಿಸಿ ಕ್ರಮದ ಭರವಸೆ ನೀಡಿದ್ದಾರೆ.
‘ಮಂಗಳೂರು ವಿವಿಯ ಕ್ಯಾಂಪಸ್ ನ ರಸ್ತೆ ಬದಿಯಲ್ಲೇ ತ್ಯಾಜ್ಯಕ್ಕೆ ಬೆಂಕಿ ಹಾಕುವುದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ನಾವು ಕುಲಸಚಿವರು ಸೇರಿದಂತೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಹಸಿ ಕಸವನ್ನು ಈಗಾಗಲೇ ಗೊಬ್ಬರ ಮಾಡುವ ಕಾರ್ಯ ವಿವಿಲ್ಲಿ ನಡೆಯುತ್ತಿದೆ. ಒಂದು ತಿಂಗಳೊಳಗೆ ವಿವಿಯ ದ್ರವತ್ಯಾಜ್ಯದ ಮರು ಬಳಕೆಯ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಈ ನಿಟ್ಟಿನಲ್ಲಿ ಸಂಸ್ಕರಣಾ ಘಟಕವನ್ನು ಆರಂಭಿಸುವ ನಿಟ್ಟಿನಲ್ಲಿ ಕಾಮಗಾರಿ ಆರಂಭಿಸುವುದಾಗಿ ಕುಲಸಚಿವರಿಂದ ಭರವಸೆ ದೊರಕಿದೆ. ಮಾತ್ರವಲ್ಲದೆ, ಒಣ ಕಸವನ್ನು ಸ್ಥಳೀಯ ಪಂಚಾಯತ್ ವ್ಯವಸ್ಥೆಯ ಮೂಲಕ ಶುಲ್ಕ ನೀಡಿ ವಿಲೇವಾರಿ ಮಾಡುವ ಹಾಗೂ ತ್ಯಾಜ್ಯ ರಾಶಿಯ ಹೊಗೆಯನ್ನು ನಂದಿಸುವ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ. ಕುಲಸಚಿವರು ಈ ಬಾರಿ ಅತ್ಯಂತ ಕಾಳಜಿಯಿಂದ ಹೆಜ್ಜೆ ಇರಿಸಿದ್ದಾರೆ. ಸಭೆಗೆ ನಿರಾಶೆಯಿಂದ ಹಾಜರಾಗಿದ್ದರೂ, ಆಶಾ ಭಾವನೆಯಿಂದ ಹಿಂದಿರುಗಿದ್ದೇವೆ. ಒಣ ಕಸ ಹಾಗೂ ದ್ರವ ತ್ಯಾಜ್ಯಕ್ಕೆ ಸಂಬಂಧಿಸಿ ಅಗತ್ಯ ಕ್ರಮಗಳನ್ನು ವಹಿಸುವ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯ ಮಾದರಿಯಾಗುವ ಭರವಸೆ ಇದೆ’.
-ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್
‘ವಿವಿ ಕ್ಯಾಂಪಸ್ ಅನ್ನು ಸಂಪೂರ್ಣ ತ್ಯಾಜ್ಯ ಮುಕ್ತವಾಗಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಕ್ಯಾಂಪಸ್ನ ದ್ರವ ತ್ಯಾಜ್ಯ ಸಂಸ್ಕರಣೆಗೊಳ್ಳುತ್ತಿದೆ. ಸಂಸ್ಕರಿತ ನೀರನ್ನು ಕ್ಯಾಂಪಸ್ ಒಳಗಿನ ಗಾರ್ಡನ್ ಗೆ ಉಪಯೋಗಿಸುವ ನಿಟ್ಟಿನಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಒಣ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಮಾಜಿ ಒಂಬುಡ್ಸ್ಮೆನ್ ಶೀನಶೆಟ್ಟಿ ಹಗೂ ಸ್ಥಳೀಯ ಗ್ರಾಪಂ ಅಧ್ಯಕ್ಷರ ಸಹಕಾರದಲ್ಲಿ ಕ್ರಮ ಆಗಲಿದೆ. ಕ್ಯಾಂಪಸ್ ನೊಳಗೆ ಎಲ್ಲಾ ರೀತಿಯ ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿಯೂ ಕ್ರಮ ವಹಿಸಲಾಗುತ್ತಿದೆ.’
-ಪ್ರೊ. ಪಿ.ಎಲ್. ಧರ್ಮ, ಕುಲಪತಿ, ಮಂಗಳೂರು ವಿವಿ.