ರಾಜ್ಯ ಸರ್ಕಾರ ರೈತರಿಗೆ ನೀಡಿದ ಭರವಸೆ ಈಡೇರಿಸದಿದ್ದಲ್ಲಿ ಬೀದಿಗಿಳಿದು ಹೋರಾಟ: ಸಂಜೀವ ಮಠಂದೂರು
Photo: facebook.com
ಪುತ್ತೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ರೈತರಿಗೆ ನೀಡಿದ ಆಶ್ವಾಸನೆಗಳನ್ನು ಕಡೆಗಣಿಸಿದ್ದು, ರೈತರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಸೌಲಭ್ಯಗಳಿಗೂ ಸಹಕರಿಸದೆ ರೈತರರಿಗೆ ಅನ್ಯಾಯ ಎಸಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರವು ತನ್ನ ರೈತ ವಿರೋಧಿ ನೀತಿಯನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಎಚ್ಚರಿಸಿದ್ದಾರೆ.
ಅವರು ಬುಧವಾರ ಪುತ್ತೂರು ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ ಬರ, ಹಣದುಬ್ಬರ, ಬೆಲೆ ಏರಿಕೆಗಳಿಂದಾಗಿ ರೈತರು ತತ್ತರಿಸಿದ್ದಾರೆ. ಕಾಂಗ್ರೆಸ್ ಪಕ್ಷವು ರೈತರಿಗೆ ನೀಡಿರುವ ಭರವಸೆ ಹುಸಿಯಾಗಿದೆ. ರೈತರಿಗೆ 3% ಬಡ್ಡಿಯಲ್ಲಿ ರೂ. 15 ಲಕ್ಷ ಮತ್ತು 0% ಬಡ್ಡಿಯಲ್ಲಿ ರೂ. 5 ಲಕ್ಷದ ತನಕ ಬೆಳೆ ಸಾಲ ನೀಡುವುದಾಗಿ ಕಾಂಗ್ರೆಸ್ ತಿಳಿಸಿತ್ತು. ಆದರೆ ಇದೀಗ ಈ ಬಗ್ಗೆ ಸರ್ಕಾರದ ಆದೇಶವಾಗಿದ್ದರೂ ಹಣವನ್ನು ಒದಗಿಸದ ಕಾರಣ ಕೃಷಿ ಪತ್ತಿನ ಸಹಕಾರಿ ಸಂಘಗಳು ದುಡ್ಡು ಇಲ್ಲದೆ ಸಾಲ ನೀಡಲು ಸಾಧ್ಯವಾಗಿಲ್ಲ. ತಕ್ಷಣವೇ ಬೆಲೆ ಸಾಲದ ಹಣವನ್ನು ಸರ್ಕಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಹಾಲಿಗೆ ರೂ. 7 ಸಹಾಯಧನ ಕೊಡುವುದಾಗಿ ತಿಳಿಸಿದ್ದ ಕಾಂಗ್ರೆಸ್ ಕಳೆದ 5 ತಿಂಗಳಿನಿಂದ ಈ ಹಿಂದಿನ ಸರ್ಕಾರ ನೀಡುತ್ತಿದ್ದ ರೂ. 5 ಸಹಾಯಧನವನ್ನೂ ನೀಡದೆ ವಂಚನೆ ನಡೆಸಿದೆ. ಜಾನುವಾರು ಖರೀದಿಗೆ ರೂ. 3 ಲಕ್ಷದ ತನಕ ಶೂನ್ಯ ಬಡ್ಡಿಯಲ್ಲಿ ಸಾಲ, ಮೀನುಗಾರ ಮಹಿಳೆಯರಿಗೆ ರೂ.3 ಲಕ್ಷ ಬಡ್ಡಿರಹಿತ ಸಾಲ ಘೋಷಣೆಯಾಗಿಯೇ ಉಳಿದಿದೆ. ಬಿಜೆಪಿ ಸರ್ಕಾರವು 24 ಗಂಟೆಗಳ ವಿದ್ಯುತ್ ನೀಡುತ್ತಿತ್ತು. ಆದರೆ 7 ಗಂಟೆಗಳ ತ್ರೀಫೇಸ್ ವಿದ್ಯುತ್ ನೀಡುವುದಾಗಿ ತಿಳಿಸಿದ್ದ ಕಾಂಗ್ರೆಸ್ ಇದೀಗ 2 ಗಂಟೆಯೂ ತ್ರೀಫೇಸ್ ವಿದ್ಯುತ್ ಸಿಗುತ್ತಿಲ್ಲ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದ ಜೊತೆಗೆ ಈ ಹಿಂದೆ ಬಿಜೆಪಿ ರಾಜ್ಯ ಸರ್ಕಾರ ನೀಡುತ್ತಿದ್ದ ರೂ. 4ಸಾವಿರ ಹಣವನ್ನು ಇದೀಗ ಸರ್ಕಾರ ನಿಲ್ಲಿಸಿದೆ. ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ರೈತ ವಿದ್ಯಾನಿಧಿ ಈತನಕ ಪಾವತಿಯಾಗಿಲ್ಲ. ಕಾಂಗ್ರೆಸ್ ಸರ್ಕಾರವು ರೈತರನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ. ರೈತರಿಗೆ ಘೋಷಣೆ ಮಾಡಿದ ಭರವಸೆಯನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರೈತರ ಸಹಕಾರಿ ಪ್ರಕೋಷ್ಠದ ಮುಖಂಡರಾದ ಡಿಸಿಸಿ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣಕುಮಾರ್ ರೈ ಗುತ್ತು. ಕೆ.ವಿ. ಪ್ರಸಾದ್ ಮತ್ತು ಪೊಡಿಯ ಉಪಸ್ಥಿತರಿದ್ದರು.