ಕಾಳೇನ ಅಗ್ರಹಾರ-ನಾಗವಾರ ಮಾರ್ಗದಲ್ಲಿ 3 ಇಂಟರ್ ಚೇಂಜ್ ನಿಲ್ದಾಣ
► 12 ಸುರಂಗ ನಿಲ್ದಾಣ ನಿರ್ಮಾಣ ►ಮೆಟ್ರೋ ಮಾರ್ಗ 2025ಕ್ಕೆ ಪೂರ್ಣ
ಬೆಂಗಳೂರು: ನಮ್ಮ ಮೆಟ್ರೊ ಹಂತ-2ರ ಯೋಜನೆಯ ಅಡಿಯಲ್ಲಿ ರೀಚ್-6 ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21.26 ಕಿ.ಮೀ. ಉದ್ದವಿದ್ದು, 18 ನಿಲ್ದಾಣಗಳನ್ನು ಹೊಂದಿದೆ. ಈ ಮಾರ್ಗದಲ್ಲಿ ಮೂರು ಇಂಟರ್ ಚೇಂಜ್ ನಿಲ್ದಾಣಗಳಿದ್ದು, ಮಾರ್ಗವನ್ನು 2025ರ ವೇಳೆಗೆ ಪೂರ್ಣಗೊಳಿಸುವ ನಿರೀಕ್ಷೆ ಇದೆ.
ಒಟ್ಟು 21.26 ಕಿ.ಮೀ. ಉದ್ದದ ಈ ಮಾರ್ಗದಲ್ಲಿ 7.50 ಕಿ.ಮೀ. ಎತ್ತರಿಸಿದ ಮಾರ್ಗವಾಗಿದ್ದು, ಕಾಳೇನ ಅಗ್ರಹಾರದಿಂದ ಸ್ವಾಗತ್ ರಸ್ತೆವರೆಗೆ 6 ನಿಲ್ದಾಣಗಳನ್ನು ಮತ್ತು 13.76 ಕಿ.ಮೀ. ಸುರಂಗ ಮಾರ್ಗದಲ್ಲಿ ಡೈರಿ ವೃತ್ತದಿಂದ ನಾಗವಾರದವರೆಗೆ 12 ನಿಲ್ದಾಣಗಳನ್ನು ಒಳಗೊಂಡಿದೆ.
ದಕ್ಷಿಣ ರಾಂಪ್(ಡೈರಿ ಸರ್ಕಲ್) ಮತ್ತು ನಾಗವಾರ ನಡುವೆ 13.76 ಕಿ.ಮೀ. ಉದ್ದ ಸುರಂಗ ಮಾರ್ಗ ಇದ್ದು, ಶೇ.91ರಷ್ಟು ಸುರಂಗ ಮಾರ್ಗ ಪೂರ್ಣವಾಗಿದೆ. ಇದಕ್ಕೆ 9 ಟಿಬಿಎಂ ಯಂತ್ರಗಳನ್ನು ಅಳವಡಿಸಲಾಗಿತ್ತು. ಪ್ರಸ್ತುತ 7 ಟಿಬಿಎಂ ಯಂತ್ರಗಳು ಕಾಮಗಾರಿಯನ್ನು ಪೂರ್ಣಗೊಳಿಸಿವೆ. 12 ಸುರಂಗ ಮಾರ್ಗದ ನಿಲ್ದಾಣಗಳ ಕಾಮಗಾರಿಗಳ ಶೇ.75ರಷ್ಟು ಪೂರ್ಣಗೊಂಡಿದೆ. ಅಫ್ಕಾನ್ಸ್, ಎಲ್ ಆ್ಯಂಡ್ ಟಿ, ಐಟಿಡಿ ಕಂಪೆನಿಗಳು ಸುರಂಗ ಮಾರ್ಗ ಕೊರೆಯಲು ಬಿಎಂಆರ್ಸಿಎಲ್ನೊಂದಿಗೆ ಒಪ್ಪಂದ ಮಾಡಿಕೊಂಡಿವೆ.
ಮಾರ್ಗದಲ್ಲಿ ಬರುವ ಇಂಟರ್ಚೇಂಜ್ ನಿಲ್ದಾಣಗಳು: ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಮೂರು ಇಂಟರ್ಚೇಂಜ್ ನಿಲ್ದಾಣಗಳು ಬರಲಿದ್ದು, ಕಂಟೋನ್ಮೆಂಟ್ ಮೆಟ್ರೊ ನಿಲ್ದಾಣವು ಭಾರತೀಯ ರೈಲ್ವೆಯ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ. ಜಯದೇವ ಇಂಟರ್ಚೇಂಜ್ ನಿಲ್ದಾಣ, ಎಂ.ಜಿ.ರಸ್ತೆ ಇಂಟರ್ಚೇಂಜ್ ನಿಲ್ದಾಣ, ನಾಗವಾರ ಇಂಟರ್ಚೇಂಜ್ ನಿಲ್ದಾಣ ಇವು ಈ ಮಾರ್ಗದ ಇಂಟರ್ಚೇಂಜ್ ನಿಲ್ದಾಣಗಳಾಗಿವೆ.
ಜಯದೇವ ಇಂಟರ್ಚೇಂಜ್ ನಿಲ್ದಾಣ: ಜಯದೇವ ಆಸ್ಪತ್ರೆ ಬಳಿ ಐದು ಹಂತದ ಎತ್ತರಿಸಿದ ನಿಲ್ದಾಣವನ್ನು ನಿರ್ಮಿಸಲಾಗಿದೆ. ಇದರಲ್ಲಿ 3 ಹಂತಗಳ ರಸ್ತೆ ಮತ್ತು 2 ಹಂತಗಳ ಮೆಟ್ರೊ ರೈಲು ಮಾರ್ಗಗಳು ಇರಲಿವೆ. ಈ ನಿಲ್ದಾಣವು ರೀಚ್-6 ಮತ್ತು ರೀಚ್-5ರ ಮಾರ್ಗಗಳ ನಡುವೆ ಬದಲಾವಣೆ ಸೌಲಭ್ಯವನ್ನು ಹೊಂದಲಿದೆ.
ಎಂ.ಜಿ. ರಸ್ತೆ ಇಂಟರ್ಚೇಂಜ್ ನಿಲ್ದಾಣ: ಪ್ರಸ್ತುತ ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದ ಬಳಿ ಕಾಮರಾಜ ರಸ್ತೆಯಲ್ಲಿ ನೆಲದಡಿ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ. ಈ ಸುರಂಗ ನಿಲ್ದಾಣವು 4 ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಹೊಂದಿರುತ್ತದೆ. ಇದರಲ್ಲಿ ಒಂದು ಪ್ರವೇಶ ಮತ್ತು ನಿರ್ಗಮನ ದ್ವಾರವನ್ನು ಎತ್ತರಿಸಿದ ಎಂ.ಜಿ ರಸ್ತೆ ಮೆಟ್ರೊ ನಿಲ್ದಾಣದೊಂದಿಗೆ ಸಂಯೋಜಿಸಲಾಗಿರುತ್ತದೆ. ಇದರಿಂದ ರೀಚ್-6 ಮತ್ತು ರೀಚ್-1ರ ಮಾರ್ಗಗಳ ನಡುವೆ ತಡೆ ರಹಿತ ಬದಲಾವಣೆ ಸುಗಮಗೊಳಿಸಲು ಸಾಧ್ಯವಾಗುತ್ತದೆ.
ನಾಗವಾರ ಇಂಟರ್ಚೇಂಜ್ ನಿಲ್ದಾಣ: ರೀಚ್-6ರ ಸುರಂಗ ಮಾರ್ಗವನ್ನು ನಾಗವಾರದಲ್ಲಿ ಏರ್ಪೋರ್ಟ್ ಮೆಟ್ರೊ ಮಾರ್ಗದೊಂದಿಗೆ ಎತ್ತರಿಸಲಾದ ಮೆಟ್ರೊ ನಿಲ್ದಾಣದೊಂದಿಗೆ ಸಂಯೋಜಿಸಲಾಗುತ್ತದೆ. ಇದರಿಂದ ಪ್ರಯಾಣಿಕರು ರೀಚ್-6ರ ಮಾರ್ಗ ಮತ್ತು ಏರ್ಪೋರ್ಟ್ ಮೆಟ್ರೊ ಮಾರ್ಗಗಳ ನಡುವೆ ತಡೆರಹಿತವಾಗಿ ಬದಲಾವಣೆ ಮಾಡಲು ಅನುಕೂಲವಾಗುತ್ತದೆ.
ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣ: ಭಾರತೀಯ ರೈಲ್ವೆಯ ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ನೆಲದಡಿ ಮೆಟ್ರೊ ನಿಲ್ದಾಣವನ್ನು ನಿರ್ಮಿಸಲಾಗುತ್ತಿದ್ದು, ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮೆಟ್ರೊ ನಿಲ್ದಾಣವನ್ನು ಭಾರತೀಯ ರೈಲ್ವೆಯ ನಿಲ್ದಾಣದೊಂದಿಗೆ ಪಾದಚಾರಿ ಮೇಲು ಸೇತುವೆಯ ಮೂಲಕ ಸಂಪರ್ಕಿಸಲಾಗುತ್ತದೆ. ಎಂ.ಜಿ. ರಸ್ತೆ ನೆಲದಡಿ ನಿಲ್ದಾಣದ ಕಾಮಗಾರಿಗಾಗಿ ಮುಚ್ಚಿರುವ ಕಾಮರಾಜ ರಸ್ತೆಯನ್ನು ಸಾರ್ವಜನಿಕರ ಸುಗಮ ಸಂಚಾರಕ್ಕೆ ಎಪ್ರಿಲ್ 2024ರ ವೇಳೆಗೆ ತೆರೆಯಲಾಗುವುದು.
ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ವಾಹನ ದಟ್ಟನೆ ಹೆಚ್ಚುತ್ತಿದೆ. ನಮ್ಮ ಮೆಟ್ರೊ ರೈಲು ಸಂಚಾರದಿಂದಾಗಿ ವಾಹನ ದಟ್ಟನೆಯನ್ನು ಸ್ಪಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಬಹುದಾಗಿದೆ. ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಚರಿಸಬೇಕಾದರೆ ಸಾರ್ವಜನಿಕರು ಎರಡು ಮೂರು ಬಸ್ ಬದಲಾವಣೆ ಮಾಡಬೇಕು. ಈಗ ಮೆಟ್ರೊ ಹಂತ-2ರ ಯೋಜನೆಯ ಅಡಿಯಲ್ಲಿ ರೀಚ್ 6 ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುತ್ತಿದೆ. ಇದರಿಂದ ಬನ್ನೇರುಘಟ್ಟ ರಸ್ತೆ, ಜಯದೇವ ಆಸ್ಪತ್ರೆಯ ಜಂಕ್ಷನ್ ಸೇರಿದಂತೆ ಮತ್ತಿತರ ಸ್ಥಳಗಳಲ್ಲಿ ವಾಹನ ದಟ್ಟಣೆ ನಿಯಂತ್ರಣ ಆಗಲಿದೆ.
- ರಾಕೇಶ್, ಬೆಂಗಳೂರಿನ ನಿವಾಸಿ