ವಾರಕ್ಕೊಮ್ಮೆ ಇಂದಿರಾ ಕ್ಯಾಂಟೀನ್ ಗುಣಮಟ್ಟ ಪರಿಶೀಲಿಸಲು ಡಿ.ಕೆ.ಶಿವಕುಮಾರ್ ಸೂಚನೆ
ಬೆಂಗಳೂರು: ‘ಪ್ರತಿ ವಾರ, ತಿಂಗಳಿಗೆ ಇಂದಿರಾ ಕ್ಯಾಂಟೀನ್‍ಗೆ ಖುದ್ದು ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲಿಸಬೇಕು’ ಎಂದು ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೂಚನೆ ನೀಡಿದ್ದಾರೆ.
ರವಿವಾರ ದಾಸರಹಳ್ಳಿಯ 15ನೆ ವಾರ್ಡ್ ಕ್ಯಾಂಟೀನ್‍ಗೆ ಭೇಟಿ ನೀಡಿ ಉಪಹಾರ ಸೇವಿಸಿ, ಗುಣಮಟ್ಟ ಪರಿಶೀಲನೆ ನಡೆಸಿದರು. ಆನಂತರ, ಸ್ಥಳೀಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು, ಪ್ರತಿ ವಾರ, ತಿಂಗಳಿಗೆ ಇಂದಿರಾ ಕ್ಯಾಂಟೀನ್‍ಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸುವಂತೆ ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದಕ್ಕೂ ಮೊದಲು ಇಂದಿರಾ ಕ್ಯಾಂಟೀನ್‍ಗೆ ಭೇಟಿ ನೀಡಿ ತಿಂಡಿ ಕೇಳಿದಾಗ ಅದಾಗಲೇ ತಿಂಡಿ ಖಾಲಿಯಾಗಿದೆ ಎಂದು ಸಿಬ್ಬಂದಿ ಉತ್ತರಿಸಿದರು. ಈ ವೇಳೆ ಎಷ್ಟು ಮಂದಿಗೆ ನಿತ್ಯ ಆಹಾರ ಬರುತ್ತದೆ ಎಂದು ಕ್ಯಾಂಟೀನ್ ವ್ಯವಸ್ಥಾಪಕರಿಗೆ ಪ್ರಶ್ನಿಸಿದಾಗ 208 ಪ್ಲೇಟ್ ಬಂದು ಖಾಲಿ ಆಗಿದೆ ಉತ್ತರಿಸಿದಾಗ, ತಿಂಡಿ ಪೂರೈಕೆಯನ್ನು ಖಾತರಿಪಡಿಸಿಕೊಳ್ಳಲು ಶಿವಕುಮಾರ್ ಸೂಚನೆ ನೀಡಿದರು.
ಆನಂತರ, ಸೀಗೇಹಳ್ಳಿ ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ 120 ಮೆಟ್ರಿಕ್ ಟನ್ ಹಸಿ ತ್ಯಾಜ್ಯ ಸಮಾಥ್ರ್ಯವಿದ್ದು, ಸದ್ಯ ಸಂಸ್ಕರಣಾ ಘಕಟವು ಚಾಲ್ತಿಯಲ್ಲಿ ಇರುವುದಿಲ್ಲ. ಅದನ್ನು ಕೂಡಲೆ ಪ್ರಾರಂಭಿಸಲು ಸೂಚನೆ ನೀಡಿದರು. ಅದೇ ರೀತಿ, ಕನ್ನಹಳ್ಳಿ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 350 ಮೆಟ್ರಿಕ್ ಟನ್ ಹಸಿ ತ್ಯಾಜ್ಯ ಸಂಸ್ಕರಿಸುವ ಸಾಮಥ್ರ್ಯವಿದ್ದು, ಪ್ರತಿನಿತ್ಯ 350 ಮೆಟ್ರಿಕ್ ಟನ್ ಸಂಸ್ಕರಣೆ ಮಾಡಲಾಗುತ್ತಿದೆ. ಪ್ರತಿನಿತ್ಯ ನಿತ್ಯ ಎಷ್ಟು ಕಾಂಪ್ಯಾಕ್ಟರ್ ಬರುತ್ತದೆ, ಅದಕ್ಕೆ ಅಳವಡಿಸಿರುವ ಜಿಪಿಎಸ್ ಅನ್ನು ಪರಿಶೀಲಿಸಿದರು.
ದೊಡ್ಡಬಿದರಕಲ್ಲು ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿಯೂ 150 ಮೆಟ್ರಿಕ್ ಟನ್ ಹಸಿ ತ್ಯಾಜ್ಯ ಸಂಸ್ಕರಿಸುವ ಸಾಮಥ್ರ್ಯವಿದ್ದು, ಪ್ರತಿನಿತ್ಯ 110 ಮೆಟ್ರಿಕ್ ಟನ್ ಸಂಸ್ಕರಣೆ ಮಾಡಲಾಗುತ್ತಿದ್ದು, ಅದನ್ನು ಪರಿಶೀಲನೆ ನಡೆಸಿದರು.ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಘನತ್ಯಾಜ್ಯ ಸಂಗ್ರಹ ಹೆಚ್ಚಳವಾಗುತ್ತಿದ್ದು, ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಕುರಿತು ಗಂಭೀರ ಚಿಂತನೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್‍ಕುಮಾರ್, ವಲಯ ಜಂಟಿ ಆಯುಕ್ತ ಜಗದೀಶ್ ಸೇರಿದಂತೆ ಪ್ರಮುಖರಿದ್ದರು.