ಇಸ್ರೋದ ನೂತನ ಅಧ್ಯಕ್ಷರಾಗಿ ವಿ. ನಾರಾಯಣನ್ ಅಧಿಕಾರ ಸ್ವೀಕಾರ
ವಿ. ನಾರಾಯಣನ್ | PC : X
ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ನೂತನ ಅಧ್ಯಕ್ಷರಾಗಿ ತಮಿಳುನಾಡಿನ ಡಾ. ವಿ. ನಾರಾಯಣನ್ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಎಸ್. ಸೋಮನಾಥ್ ತೆರವುಗೊಳಿಸಿರುವ ಸ್ಥಾನವನ್ನು ತುಂಬಿದ್ದಾರೆ.
‘‘ಗಣ್ಯ ವಿಜ್ಞಾನಿ ಡಾ. ವಿ. ನಾರಾಯಣನ್ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ, ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮತ್ತು ಇಸ್ರೋದ ಅಧ್ಯಕ್ಷರಾಗಿ ಜನವರಿ 13ರಂದು ಅಧಿಕಾರ ವಹಿಸಿಕೊಂಡಿದ್ದಾರೆ’’ ಎಂದು ಇಸ್ರೋ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇದಕ್ಕೂ ಮುನ್ನ, ನಾರಾಯಣನ್ ಇಸ್ರೋದ ಲಿಕ್ವಿಡ್ ಪ್ರೊಪಲ್ಶನ್ ಸಿಸ್ಟಮ್ಸ್ ಸೆಂಟರ್ (ಎಲ್ಪಿಎಸ್ಸಿ)ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಎಲ್ಪಿಎಸ್ಸಿ, ಉಡಾವಣಾ ವಾಹಕಗಳು ಮತ್ತು ಬಾಹ್ಯಾಕಾಶ ನೌಕೆಗಳ ಹಾರಾಟದಲ್ಲಿ ಬಳಸಲಾಗುವ ಯಂತ್ರಗಳ ಅಭಿವೃದ್ಧಿಯ ಮುಖ್ಯ ಘಟಕವಾಗಿದೆ.
ಮುಂದುವರಿದ ಬಾಹ್ಯಾಕಾಶ ಸಂಶೋಧನೆ, ಉಪಗ್ರಹ ತಂತ್ರಜ್ಞಾನ ಮತ್ತು ಮಾನವಸಹಿತ ಬಾಹ್ಯಾಕಾಶ ಯಾನ ಯೋಜನೆಗಳನ್ನು ಇಸ್ರೋ ಕೈಗೆತ್ತಿಕೊಂಡಿರುವ ಮಹತ್ವದ ಕಾಲಘಟ್ಟದಲ್ಲಿ ಸಂಸ್ಥೆಯ ಮುಖ್ಯಸ್ಥರಾಗಿ ನಾರಾಯಾಣನ್ ಅಧಿಕಾರ ವಹಿಸಿಕೊಂಡಿದ್ದಾರೆ.
ತಮಿಳುನಾಡಿನ ನಾಗರ್ಕೋಯಿಲ್ನ ಮೇಳಕಟ್ಟು ಎಂಬ ಗ್ರಾಮದಲ್ಲಿ ಜನಿಸಿದ ನಾರಾಯಣನ್ ಪ್ರಾಥಮಿಕ ಶಿಕ್ಷಣವನ್ನು ತನ್ನದೇ ಗ್ರಾಮದಲ್ಲಿ ಪಡೆದರು. ಅವರು ಬಳಿಕ ಮೆಕ್ಯಾನಿಕ್ ಇಂಜಿನಿಯರಿಂಗ್ನಲ್ಲಿ ಪ್ರಥಮ ದರ್ಜೆಯಲ್ಲಿ ಡಿಪ್ಲೊಮಾ ಪಡೆದರು. ಅವರಿಗೆ ಇಂಜಿನಿಯರ್ಗಳ ಸಂಘಟನೆ ಎಎಮ್ಐಇ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಅಸೋಸಿಯೇಟ್ ಮೆಂಬರ್ಶಿಪ್ ನೀಡಿದೆ.
ಅವರು ಬಳಿಕ ಐಐಟಿ ಖರಗಪುರದಲ್ಲಿ ಕ್ರಯೋಜೆನಿಕ್ ಇಂಜಿನಿಯರಿಂಗ್ನಲ್ಲಿ ಬೆಳ್ಳಿ ಪದಕದೊಂದಿಗೆ ಎಮ್.ಟೆಕ್ ಮಾಡಿದರು. ಅದೂ ಅಲ್ಲದೆ ಅವರು ಏರೋಸ್ಪೇಸ್ಇಂಜಿನಿಯರಿಂಗ್ನಲ್ಲಿ ಪಿಎಚ್ಡಿ ಮಾಡಿದ್ದಾರೆ.
ಅವರು 1984ರಲ್ಲಿ ಇಸ್ರೋ ಸೇರಿದರು. ಅಲ್ಲಿ ಅವರು ರಾಕೆಟ್ ಪ್ರೊಪಲ್ಶನ್ ಕ್ಷೇತ್ರದಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ.
ಡಾ. ನಾರಾಯಣನ್ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ 3 ಸಿ25 ಕ್ರಯೋಜೆನಿಕ್ ಯೋಜನೆಯಲ್ಲಿ ಯೋಜನಾ ನಿರ್ದೇಶಕರಾಗಿದ್ದರು. ಸಿ25 ಕ್ರಯೋಜೆನಿಕ್ ಸ್ಟೇಜ್ನ ಅಭಿವೃದ್ಧಿಯಲ್ಲಿ ಅವರು ಮಹತ್ವದ ಪಾತ್ರ ವಹಿಸಿದರು.