ಅಗ್ರ 10 ವೈಯಕ್ತಿಕ ಖರೀದಿದಾರರ ಬಾಂಡ್ ಗಳ ಪೈಕಿ ಶೇಕಡ 84 ಬಿಜೆಪಿ ಪಾಲು
ಹೊಸದಿಲ್ಲಿ: ಚುನಾವಣಾ ಬಾಂಡ್ ಗಳು ಅಸ್ತಿತ್ವವಿದ್ದ ಅವಧಿಯಲ್ಲಿ ಅಂದರೆ 2019ರ ಏಪ್ರಿಲ್ 12ರಿಂದ 2024ರ ಜನವರಿ 11ರ ಅವಧೀಯಲ್ಲಿ ಅಗ್ರ ಹತ್ತು ಮಂದಿ ವೈಯಕ್ತಿಕ ಖರೀದಿದಾರರು 180.2 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿದ್ದು, ಈ ಪೈಕಿ ಶೇಕಡ 84.5ರಷ್ಟು ಬಾಂಡ್ ಗಳ ಬಿಜೆಪಿ ಖಜಾನೆ ಸೇರಿವೆ. ವೈಯಕ್ತಿಕ ಖರೀದಿದಾರರು ಬಿಜೆಪಿಗೆ ಅತಿಹೆಚ್ಚು ದೇಣಿಗೆ ನೀಡಿರುವುದು ಚುನಾವಣಾ ಆಯೋಗ ಬಹಿರಂಗಪಡಿಸಿದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ವೈಯಕ್ತಿಕ ದೇಣಿಗೆಯ ಪೈಕಿ ಶೇಕಡ 9ರಷ್ಟು ಪಾಲು ಪಡೆದಿರುವ ಟಿಎಂಸಿ ಎರಡನೇ ಸ್ಥಾನದಲ್ಲಿದ್ದರೆ, ಭಾರತ ರಾಷ್ಟ್ರ ಸಮಿತಿ 5 ಕೋಟಿ ರೂಪಾಯಿ ವೈಯಕ್ತಿಕ ದೇಣಿಗೆ ಸ್ವೀಕರಿಸಿ ಮೂರನೇ ಸ್ಥಾನದಲ್ಲಿದೆ.
ವೈಯಕ್ತಿಕವಾಗಿ ಅತಿಹೆಚ್ಚು ದೇಣಿಗೆ ನೀಡಿರುವ ಅರ್ಸೆಲಾರ್ ಮಿತ್ತಲ್ ಅಧ್ಯಕ್ಷ ಲಕ್ಷ್ಮಿ ನಿವಾಸ್ ಮಿತ್ತಲ್ 35 ಕೋಟಿ ರೂಪಾಯಿ ಮೌಲ್ಯದ ಬಾಂಡ್ ಖರೀದಿಸಿದ್ದು, ಎಲ್ಲ ಮೊತ್ತವನ್ನು ಬಿಜೆಪಿಗೆ ನೀಡಿದ್ದಾರೆ. ವೈಯಕ್ತಿಕವಾಗಿ ಎರಡನೇ ದೊಡ್ಡ ಖರೀದಿದಾರೆನಿಸಿದ ಲಕ್ಷ್ಮೀದಾಸ್ ವಲ್ಲಭದಾಸ್ ಮರ್ಚೆಂಟ್ 2023ರ ನವೆಂಬರ್ ನಲ್ಲಿ ಬಿಜೆಪಿಗೆ 25 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ ಮರ್ಚೆಂಟ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಗ್ರೂಪ್ ಕಂಟ್ರೋಲರ್ ಆಗಿದ್ದು, 33 ವರ್ಷಗಳಿಂದ ಕಂಪನಿಯಲ್ಲಿದ್ದಾರೆ.
ಅಗ್ರ 10 ಮಂದಿ ವೈಯಕ್ತಿಕ ಖರೀದಿದಾರರ ಪೈಕಿ ಮಿತ್ತಲ್, ಮರ್ಚೆಂಟ್, ಕೆ.ಆರ್.ರಾಜಾ ಜೆ.ಟಿ, ಇಂದ್ರ ಠಾಕೂರ್ದಾಸ್ ಜೈಸಿಂಘಾನಿ, ರಾಹುಲ್ ಜಗನ್ನಾಥ್ ಜೋಶಿ ಮತ್ತು ಅವರ ಮಗ ಹರ್ಮೇಶ್ ರಾಹುಲ್ ಜೋಶಿ, ರಾಜು ಕುಮಾರ್ ಶರ್ಮಾ, ಸೌರಭ್ಗುಪ್ತಾ ಮತ್ತು ಅನಿತಾ ಹೇಮಂತ್ ಶಾ ಕೇವಲ ಬಿಜೆಪಿಗೆ ಮಾತ್ರ ದೇಣಿಗೆ ನೀಡಿದ್ದಾರೆ.
ಜೈಸಿಂಘಾನಿಯವರು ದೇಶದ ಅತಿದೊಡ್ಡ ವೈರ್ ಮತ್ತು ಕೇಬಲ್ ಉತ್ಪಾದಕರಾಗಿರುವ ಪಾಲಿಕ್ಯಾಬ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೋಶಿ ತಂದೆ-ಮಗ ಹಲವು ಕಂಪನಿಗಳ ಆಡಳಿತ ಮಂಡಳಿಗಳಲ್ಲಿದ್ದಾರೆ.