ಜಮ್ಮು-ಕಾಶ್ಮೀರದಲ್ಲಿ ಎನ್ಕೌಂಟರ್ | ಮೂವರು ಭಯೋತ್ಪಾದಕರ ಹತ್ಯೆ,40 ಗಂಟೆಗಳ ಕಾರ್ಯಾಚರಣೆ ಅಂತ್ಯ
Photo: PTI - ಸಾಂದರ್ಭಿಕ ಚಿತ್ರ
ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಮ್ನ ರೇಡವಾನಿ ಪಾಯೀನ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಮೂವರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಭಾರತೀಯ ಸೇನೆಯು ಗುರುವಾರ ತಿಳಿಸಿದೆ.
‘ಮೇ 6-7ರ ರಾತ್ರಿ ಆರಂಭಗೊಂಡಿದ್ದ ಜಂಟಿ ಕಾರ್ಯಾಚರಣೆಯು ಸುಮಾರು 40 ಗಂಟೆಗಳ ಬಳಿಕ ಅಂತ್ಯಗೊಂಡಿದೆ. ಮೂವರು ಭಯೋತ್ಪಾದಕರನ್ನು ಕೊಲ್ಲಲಾಗಿದ್ದು, ಅವರ ಬಳಿಯಿದ್ದ ಯುದ್ಧಗಳಲ್ಲಿ ಬಳಸುವಂತಹ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಭಯೋತ್ಪಾದನೆ ವ್ಯವಸ್ಥೆಗೆ ಇನ್ನೊಂದು ಹೊಡೆತವನ್ನು ನೀಡಲಾಗಿದೆ ’ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ. ಕಾಶ್ಮೀರದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳಲು ಚಿನಾರ್ ಕಾರ್ಪ್ಸ್ ಬದ್ಧವಾಗಿದೆ ಎಂದೂ ಅದು ಹೇಳಿದೆ.
ಮಂಗಳವಾರ ಅಪೇಕ್ಷಿತ ಭಯೋತ್ಪಾದಕ ಲಷ್ಕರೆ ತೈಬಾದ ಬಾಸಿತ್ ದಾರ್ ಸೇರಿದಂತೆ ಇಬ್ಬರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದರೆ, ಮೂರನೇ ಭಯೋತ್ಪಾದಕ ಬುಧವಾರ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದ.
ಮೇ 4ರಂದು ಪೂಂಛ್ನಲ್ಲಿ ಭಾರತೀಯ ವಾಯುಪಡೆಯ ವಾಹನಗಳ ಮೇಲೆ ನಡೆದಿದ್ದ ದಾಳಿಯಲ್ಲಿ ಭಾಗಿಯಾಗಿದ್ದ ಬಂದೂಕುಧಾರಿಗಳನ್ನು ಪತ್ತೆ ಹಚ್ಚಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದವು. ಆದರೆ ಭದ್ರತಾ ಪಡೆಗಳೊಂದಿಗೆ ಗುಂಡಿನ ಕಾಳಗದಲ್ಲಿ ತೊಡಗಿದ್ದ ಭಯೋತ್ಪಾದಕರೇ ಪೂಂಛ್ ದಾಳಿಯ ಹಿಂದಿದ್ದರೇ ಎನ್ನುವುದು ಇನ್ನೂ ತಿಳಿದುಬಂದಿಲ್ಲ.
ಪೂಂಛ್ ದಾಳಿಯ ಬಳಿಕ ಜಮ್ಮು-ಕಾಶ್ಮೀರದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸುರಾನಕೋಟ್ನಿಂದ ಜರನ್ ವಾಲಿ ಗಲಿವರೆಗೆ ಮತ್ತು ರಾಜೌರಿಯಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದು, ಹಲವಾರು ಮುಖ್ಯ ರಸ್ತೆಗಳಲ್ಲಿ ತಪಾಸಣಾ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ.
ಮೇ 4ರಂದು ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ ವಾಯುಪಡೆಯ ಅಧಿಕಾರಿ ವಿಕ್ಕಿ ಪಹಾಡೆ ಮೃತಪಟ್ಟು ಇತರ ನಾಲ್ವರು ಗಾಯಗೊಂಡಿದ್ದರು.
ಪಹಾಡೆಯವರ ಅಂತ್ಯಸಂಸ್ಕಾರವು ಸೋಮವಾರ ಅವರ ಹುಟ್ಟೂರು ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ನಡೆದಿದೆ.