ನಾಲ್ವರ ಪೈಕಿ ಓರ್ವ ಮಧುಮೇಹಿಗೆ ಹೃದಯಾಘಾತದ ಅಪಾಯ : ಅಧ್ಯಯನ ವರದಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ನಾಲ್ವರ ಪೈಕಿ ಓರ್ವ ಮಧುಮೇಹಿಗೆ ಹೃದಯಾಘಾತದ ಅಪಾಯವಿದೆ ಎಂದು ಮುಂಬೈ ಮತ್ತು ದಿಲ್ಲಿ-ಎನ್ಸಿಆರ್ ಪ್ರಯೋಗಾಲಯಗಳಲ್ಲಿ ನಡೆದಿರುವ ಅಧ್ಯಯನದಿಂದ ತಿಳಿದು ಬಂದಿದೆ.
ದಿಲ್ಲಿ - ಎನ್ಸಿಆರ್ ಮೂಲದ ಡಾ. ಡ್ಯಾಂಗ್ಸ್ ಪ್ರಯೋಗಾಲಯ ನಡೆಸಿರುವ 2,000 ರೋಗಿಗಳ ಮಾದರಿಯ ವಿಶ್ಲೇಳಷಣೆ ಪ್ರಕಾರ, HbA1c ಮಟ್ಟವು 6.5ಗಿಂತ ಹೆಚ್ಚಿರುವ ಶೇ. 15ರಷ್ಟು ರೋಗಿಗಳಲ್ಲಿ ಮುಂಚಿತ ಹೃದಯಾಘಾತಕ್ಕೆ ಕಾರಣವಾಗುವ ಪ್ರಮುಖ ಜೈವಿಕ ಉತ್ಪಾದಕ NT-proBNPಯ ಪ್ರಮಾಣ ಹೆಚ್ಚಿರುವುದು ಕಂಡು ಬಂದಿದೆ ಎಂದು ಹೇಳಿದೆ. ಮುಂಬೈನ 1054 ರೋಗಿಗಳ ಅಧ್ಯಯನದ ಪ್ರಕಾರ, ಟೈಪ್-2 ಮಧುಮೇಹ ಹೊಂದಿರುವ ರೋಗಿಗಳ ಪೈಕಿ ಶೇ. 34ರಷ್ಟು ರೋಗಿಗಳಲ್ಲಿ ಹೃದಯ ರಕ್ತನಾಳದ ಸಂಕೀರ್ಣತೆ ಅಪಾಯದಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ಹೇಳಲಾಗಿದೆ.
ಈಗಾಗಲೇ ಹೃದಯ ರಕ್ತನಾಳ ಸಂಬಂಧಿ ಅಪಾಯಗಳು ಗಮನಾರ್ಹ ಪ್ರಮಾಣದಲ್ಲಿರುವ ಟೈಪ್ - 2 ಮಧುಮೇಹಿಗಳಲ್ಲಿ ಹೃದಯಾಘಾತವು ಬಹು ಗಂಭೀರ ಸಂಕೀರ್ಣತೆಯಾಗಿದೆ ಎಂದು ಎರಡೂ ಅಧ್ಯಯನಗಳು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಾ. ಡ್ಯಾಂಗ್ಸ್ ಲ್ಯಾಬ್ ನ ಡಾ. ಅರ್ಜುನ್ ಡ್ಯಾಂಗ್, “ಈ ಅಧ್ಯಯನವು ಒಂದು ಎಚ್ಚರಿಕೆಯ ಗಂಟೆಯಾಗಿದೆ. ಹೃದಯಾಘಾತದ ಅಪಾಯವಿರುವ ಮಧುಮೇಹಿಗಳಿಗೆ ಸಕಾಲಿಕ ಪರಿಶೀಲನೆ ಮತ್ತು ಮಧ್ಯಪ್ರವೇಶದ ತುರ್ತು ಅಗತ್ಯವಿದೆ. ಮಧುಮೇಹ ಮತ್ತು ಹೃದಯಾಘಾತದ ನಡುವೆ ಇರುವ ನಿಶ್ಯಬ್ದ ಸಂಪರ್ಕದ ಕುರಿತು ಜಾಗೃತಿ ಮೂಡಿಸುವ ಮೂಲಕ, ನಾವು ರೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಬಹುದು ಹಾಗೂ ಗಂಭೀರ ಸ್ವರೂಪದ ಸಂಕೀರ್ಣತೆಗಳನ್ನು ತಗ್ಗಿಸಬಹುದು ಎಂದು ಹೇಳಿದ್ದಾರೆ.