ಮಹಾ ಕುಂಭಮೇಳದಲ್ಲಿ ಕಾಲ್ತುಳಿತ: ಕನಿಷ್ಠ 10 ಮಂದಿ ಮೃತಪಟ್ಟಿರುವ ಶಂಕೆ

Photo: PTI
ಲಕ್ನೋ: ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಬುಧವಾರ ಮುಂಜಾನೆ ಕಾಲ್ತುಳಿತ ಸಂಭವಿಸಿದ್ದರಿಂದ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
'ಎರಡನೇ ಶಾಹಿ ಸ್ನಾನ' ದಿನವಾದ ಮೌನಿ ಅಮಾವಾಸ್ಯೆಯ ಸಂದರ್ಭದಲ್ಲಿ ತ್ರಿವೇಣಿ ಸಂಗಮದಲ್ಲಿ ಹತ್ತಾರು ಸಾವಿರ ಜನರು ಸೇರಿದ್ದರಿಂದ, ಅಳವಡಿಸಲಾದ ತಡೆಗೋಡೆಗಳು ಮುರಿದುಹೋದ್ದರಿಂದ ಈ ಘಟನೆ ಸಂಭವಿಸಿದೆ.
ಮಹಾ ಕುಂಭ ಮೇಳದಲ್ಲಿ ಸಂಗಮ ಮತ್ತು ಇತರ ಎಲ್ಲಾ ಘಾಟ್ ಪ್ರದೇಶಗಳಲ್ಲಿ 12 ಕಿ.ಮೀ ಉದ್ದದ ನದಿ ದಂಡೆಯ ಮೇಲೆ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಜನಸಂದಣಿ ಹೆಚ್ಚಿದ್ದರಿಂದ ಈ ಘಟನೆ ಸಂಭವಿಸಿದೆ. ಕಾಲ್ತುಳಿತದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಅನೇಕ ಕುಟುಂಬಗಳು ಬೇರ್ಪಟ್ಟಿವೆ ಎಂದು ಪ್ರತ್ಯಕ್ಷದರ್ಶಿಗಳು India Todayಗೆ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಆದಿತ್ಯನಾಥ್ ಅವರೊಂದಿಗೆ ಸಂಪರ್ಕದಲ್ಲಿದ್ದು, ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ಸಹಾಯದ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಆಂಬ್ಯುಲೆನ್ಸ್ಗಳನ್ನು ರವಾನಿಸಿ ಗಾಯಾಳುಗಳನ್ನು ಕುಂಭಮೇಳದ ಸೆಕ್ಟರ್ 2 ರಲ್ಲಿರುವ ತಾತ್ಕಾಲಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸಂಗಮದಲ್ಲಿ ಸ್ನಾನ ಮಾಡಿದ ನಂತರ ಭಕ್ತರು ಸ್ಥಳದಿಂದ ಹೊರಹೋಗುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕಾಲ್ತುಳಿತದ ನಂತರ ಇಂದು ಅಮೃತ ಸ್ನಾನವನ್ನು ರದ್ದುಗೊಳಿಸಲಾಗಿದೆ. ಜನಸಂದಣಿ ಕಡಿಮೆಯಾದ ನಂತರ ಅಖಾಡಗಳು ಯೋಜಿಸಿದಂತೆ ಅಮೃತ ಸ್ನಾನವನ್ನು ಮುಂದುವರಿಸಲಾಗುವುದು ಎಂದು ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ರವೀಂದ್ರ ಪುರಿ ಹೇಳಿದರು.
ಗಾಯಗೊಂಡವರ ಸಂಖ್ಯೆಯ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಘಟನೆಯಲ್ಲಿ ಕನಿಷ್ಠ 30 ರಿಂದ 40 ಜನರು ಗಾಯಗೊಂಡಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ʼಇಂಡಿಯಾ ಟುಡೇ ಟಿವಿʼಗೆ ತಿಳಿಸಿದ್ದಾರೆ.
"ನಾವು ಎರಡು ಬಸ್ಗಳಲ್ಲಿ 60 ಜನರು ಬಂದಿದ್ದೇವೆ. ನಾವು ಗುಂಪಿನಲ್ಲಿ ಒಂಭತ್ತು ಜನರಿದ್ದೆವು. ಇದ್ದಕ್ಕಿದ್ದಂತೆ, ಜನಸಂದಣಿಯಲ್ಲಿ ತಳ್ಳಾಟ ನಡೆಯಿತು. ಅದರ ಮಧ್ಯೆ ನಾವು ಸಿಕ್ಕಿಹಾಕಿಕೊಂಡೆವು. ನಮ್ಮಲ್ಲಿ ಹಲವರು ಕೆಳಗೆ ಬಿದ್ದರು. ಜನಸಂದಣಿ ನಿಯಂತ್ರಣ ತಪ್ಪಿತು" ಎಂದು ಕರ್ನಾಟಕದ ಸರೋಜಿನಿ ಅವರು ಪಿಟಿಐಗೆ ತಿಳಿಸಿದರು.