ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಗದ್ದಲ : ಪ್ರತಿಪಕ್ಷದ 10 ಸಂಸದರು ಅಮಾನತು

ಕಲ್ಯಾಣ್ ಬ್ಯಾನರ್ಜಿ (Photo: ANI)
ಹೊಸದಿಲ್ಲಿ : ವಕ್ಫ್ ತಿದ್ದುಪಡಿ ಮಸೂದೆ 2024ರ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ಸಭೆಯಲ್ಲಿ ಗದ್ದಲದ ಹಿನ್ನೆಲೆಯಲ್ಲಿ ಶುಕ್ರವಾರ 10 ಪ್ರತಿಪಕ್ಷದ ಸಂಸದರನ್ನು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡ ಸಂಸದರಲ್ಲಿ ಕಲ್ಯಾಣ್ ಬ್ಯಾನರ್ಜಿ, ಎಂಡಿ ಜವೈದ್, ಎ ರಾಜಾ, ಅಸಾದುದ್ದೀನ್ ಉವೈಸಿ, ನಾಸೀರ್ ಹುಸೇನ್, ಮೊಹಿಬುಲ್ಲಾ, ಎಂ. ಅಬ್ದುಲ್ಲಾ, ಅರವಿಂದ್ ಸಾವಂತ್, ನದಿಮುಲ್ ಹಕ್ ಮತ್ತು ಇಮ್ರಾನ್ ಮಸೂದ್ ಸೇರಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಈ ಬಗ್ಗೆ ಮಾತನಾಡಿ, ಸಮಿತಿಯ ಅಧ್ಯಕ್ಷರಾದ ಜಗದಾಂಬಿಕಾ ಪಾಲ್ ಅವರು ವಿರೋಧ ಪಕ್ಷದ ಸಂಸದರ ಧ್ವನಿಯನ್ನು ಕಡೆಗಣಿಸಿದ್ದಾರೆ. ಪಾಲ್ ಅವರು ಜಮೀನ್ದಾರಿ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜನವರಿ 30 ಮತ್ತು 31ರಂದು ಸಭೆ ನಡೆಸುವಂತೆ ನಾವು ಪದೇ ಪದೇ ಮನವಿ ಮಾಡಿದ್ದೇವೆ, ಆದರೆ ನಮ್ಮ ಮನವಿಯನ್ನು ನಿರ್ಲಕ್ಷಿಸಲಾಗಿದೆ. ನಿನ್ನೆ ರಾತ್ರಿ ದಿಲ್ಲಿಗೆ ಬಂದಿಳಿದಾಗ ಸಭೆಯ ವಿಷಯ ಬದಲಾಯಿತು. ಆರಂಭದಲ್ಲಿ ಸಭೆಯು ಷರತ್ತುಬದ್ಧವಾಗಿ ಮುಂದುವರಿಯುತ್ತದೆ ಎಂದು ನಮಗೆ ತಿಳಿಸಲಾಯಿತು. ಒಳಗೆ ಏನಾಗುತ್ತಿದೆಯೋ ಅದು ಅಘೋಷಿತ ತುರ್ತುಪರಿಸ್ಥಿತಿಯಂತೆ ಭಾಸವಾಗುತ್ತಿದೆ. ಇದು ರಾಜಕೀಯ ಪ್ರೇರಿತವಾಗಿದೆ. ಸಮಿತಿಯ ಅಧ್ಯಕ್ಷರು ನಮ್ಮ ಮಾತುಗಳನ್ನು ಕೇಳುವುದಿಲ್ಲ. ಅವರು ವಿರೋಧ ಪಕ್ಷದ ಸದಸ್ಯರಿಗೆ ಗೌರವ ಕೊಡುವುದಿಲ್ಲ. ಈ ಜೆಪಿಸಿ ಪ್ರಹಸನವಾಗಿ ಮಾರ್ಪಟ್ಟಿದೆ ಎಂದು ಹೇಳಿದ್ದಾರೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮಾತನಾಡಿ, ಜೆಪಿಸಿ ಸಭೆಯಲ್ಲಿ ಪ್ರತಿಪಕ್ಷಗಳ ಸಂಸದರು ಗದ್ದಲ ಸೃಷ್ಟಿಸಿ ಸಂಸದೀಯ ಪ್ರಜಾಪ್ರಭುತ್ವದ ವಿರುದ್ಧ ವರ್ತಿಸಿದ್ದಾರೆ ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ನಿಶಿಕಾಂತ್ ದುಬೆ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸುವ ಪ್ರಸ್ತಾಪವನ್ನು ಮಂಡಿಸಿದ್ದು, ಸಮಿತಿಯು ಅದನ್ನು ಅನುಮೋದಿಸಿದೆ.