ಈ.ಡಿ.ಯಿಂದ 55 ಕೋ.ರೂ.ವೌಲ್ಯದ 10 ಆಸ್ತಿಗಳು ಜಪ್ತಿ
ಹವಾಲಾ ಆಪರೇಟರ್ ಪ್ರಕರಣ
ಮುಂಬೈ : ಸೂರತ್ ಮೂಲದ ಹವಾಲಾ ಆಪರೇಟರ್ ಅಫ್ರೋಜ್ ಫಟ್ಟಾ ಭಾಗಿಯಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈನ ಹವಾಲಾ ಆಪರೇಟರ್ ಪಂಕಜ ಕಪೂರ್, ವಜ್ರ ವ್ಯಾಪಾರಿ ವಿಜೇನ್ ಗಿರೀಶಚಂದ್ರ ಝವೇರಿ ಮತ್ತು ಅವರ ಕುಟುಂಬ ಸದಸ್ಯರ ಹೆಸರಿನಲ್ಲಿರುವ ಸುಮಾರು 55.17 ಕೋ.ರೂ.ವೌಲ್ಯದ 10 ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಈಡಿ) ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.
ಐಸಿಐಸಿಐ ಬ್ಯಾಂಕಿನ ಸೂರತ್ ಶಾಖೆಯು ಸಲ್ಲಿಸಿದ್ದ ದೂರು ಮತ್ತು ಸೂರತ್ ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ ಆಧಾರದಲ್ಲಿ ಈ.ಡಿ.ತನಿಖೆಯನ್ನು ಆರಂಭಿಸಿತ್ತು. ಆರ್.ಎ.ಡಿಸ್ಟ್ರಿಬ್ಯೂಟರ್ಸ್ ಪ್ರೈ.ಲಿ. ಮತ್ತು ಇತರ ಎಂಟು ಕಂಪನಿಗಳು ನಕಲಿ ಎಂಟ್ರಿ ಬಿಲ್ (ಆಮದುದಾರ ಅಥವಾ ಕಸ್ಟಮ್ಸ್ ಕ್ಲಿಯರನ್ಸ್ ಏಜೆಂಟ್ ಕಸ್ಟಮ್ಸ್ ಇಲಾಖೆಗೆ ಸಲ್ಲಿಸುವ ಘೋಷಣೆ)ಗಳನ್ನು ಸಲ್ಲಿಸಿದ್ದವು ಮತ್ತು ಯುಎಇಯ ಮೂರು ಹಾಗೂ ಹಾಂಗ್ ಕಾಂಗ್ ನ 15 ಕಂಪನಿಗಳಿಗೆ ಹಣವನ್ನು ಕಳುಹಿಸಿದ್ದವು ಎಂದು ಬ್ಯಾಂಕ್ ತನ್ನ ದೂರಿನಲ್ಲಿ ಆರೋಪಿಸಿದೆ.
ಕಪೂರ್ ಮತ್ತು ಝವೇರಿ ಅನುಕ್ರಮವಾಗಿ ಯುಎಇ ಮತ್ತು ಹಾಂಗ್ ಕಾಂಗ್ ನಲ್ಲಿ 58.14 ಕೋ.ರೂ. ಮತ್ತು 2.81 ಕೋ.ಅಪರಾಧದ ಆದಾಯವನ್ನು ಸ್ವೀಕರಿಸಿದ್ದರು ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಮುಂಬೈ ಮೂಲದ ವಜ್ರದ ವ್ಯಾಪಾರಿ ಮದನಲಾಲ ಜೈನ್ ಮತ್ತು ಅಫ್ರೋಜ್ ಫಟ್ಟಾ ನಿಯಂತ್ರಣದ ಮತ್ತು ನಿರ್ವಹಣೆಯ ಕಂಪನಿಗಳು ನಕಲಿ ಎಂಟ್ರಿ ಬಿಲ್ ಗಳು ಮತ್ತು ದಾಖಲೆಗಳನ್ನು ಬಳಸಿಕೊಂಡು ಅಪರಾಧದ ಆದಾಯವನ್ನು ವಿದೇಶಗಳಿಗೆ ರವಾನಿಸಿದ್ದವು ಎಂದು ಈಡಿ ಹೇಳಿಕೆಯಲ್ಲಿ ತಿಳಿಸಿದೆ.
ಈಡಿ ಪ್ರಕರಣದಲ್ಲಿ ಈವರೆಗೆ ಒಟ್ಟು 115 ಕೋ.ರೂ.ಗಳ ಸ್ಥಿರಾಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡಿದೆ.