ವಿಶ್ವ ಸರಣಿ ಕಾರ್ಟಿಂಗ್ ನಲ್ಲಿ ಭಾಗವಹಿಸಲಿರುವ ಭಾರತದ 10ರಹರೆಯದ ಅತೀಕಾ ಮೀರ್

ಅತೀಕಾ ಮೀರ್ | PC : Instagram/atiqa.asifmir
ಹೊಸದಿಲ್ಲಿ: 29 ಬಾರಿ ವಿಶ್ವ ಚಾಂಪಿಯನ್ ಆಗಿರುವ ಬೇಬಿ ರೇಸ್ ನೊಂದಿಗೆ ಪೂರ್ಣಕಾಲಿಕ ಒಪ್ಪಂದಕ್ಕೆ ಸಹಿ ಮಾಡಿರುವ 10 ವರ್ಷದ ಅತೀಕಾ ಮೀರ್, ವಿಶ್ವ ಸರಣಿ ಕಾರ್ಟಿಂಗ್ ಚಾಂಪಿಯನ್ ಶಿಪ್ಸ್ ನಲ್ಲಿ ಭಾಗವಹಿಸಲಿರುವ ಭಾರತದ ಪ್ರಪ್ರಥಮ ಮಹಿಳೆಯಾಗಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದಕ್ಷಿಣ ಇಟಲಿಯ ಲಾ ಕೋಂಕಾ ಸರ್ಕ್ಯೂಟ್ ನಲ್ಲಿ ಆಯೋಜಿಸಲಾಗಿದ್ದ ಪರೀಕ್ಷಾ ಅವಧಿಯಲ್ಲಿ ತೋರಿದ ಪ್ರಭಾವಶಾಲಿ ಪ್ರದರ್ಶನದ ಕಾರಣಕ್ಕೆ ಅವರಿಗೆ ಈ ಅವಕಾಶ ದೊರೆತಿದೆ. ಅತೀಕಾ ಮೀರ್ ಜಮ್ಮು ಮತ್ತು ಕಾಶ್ಮೀರದ ನಿವಾಸಿಯಾಗಿದ್ದು, 60 ಕಾರ್ಟ್ ಗಳು ಭಾಗವಹಿಸುವ ಈ ಪ್ರತಿಸ್ಪರ್ಧೆಯ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುತ್ತಿರುವ ಏಕೈಕ ಮಹಿಳೆಯೂ ಆಗಿದ್ದಾರೆ.
ಈ ವರ್ಷದ ವಿಶ್ವ ಸರಣಿ ಕಾರ್ಟಿಂಗ್ ನ ಎಲ್ಲ ಮೂರು ಚಾಂಪಿಯನ್ ಶಿಪ್ ನಲ್ಲೂ ಅವರು ಭಾಗವಹಿಸಲಿದ್ದಾರೆ. ವಿಶ್ವ ಸರಣಿ ಕಾರ್ಟಿಂಗ್ ಸೂಪರ್ ಮಾಸ್ಟರ್ ಸರಣಿ, ವಿಶ್ವ ಸರಣಿ ಕಾರ್ಟಿಂಗ್ ಯೂರೊ ಸರಣಿ ಹಾಗೂ ವಿಶ್ವ ಸರಣಿ ಕಾರ್ಟಿಂಗ್ ಫೈನಲ್ ಕಪ್ ಸೇರಿದಂತೆ ಮೂರೂ ಚಾಂಪಿಯನ್ ಶಿಪ್ ಗಳಲ್ಲಿ ಅವರು ಭಾಗವಹಿಸಲಿದ್ದಾರೆ.
ಈ ಪೈಕಿ ಮೊದಲ ಚಾಂಪಿಯನ್ ಶಿಪ್ ಆದ ವಿಶ್ವ ಸರಣಿ ಕಾರ್ಟಿಂಗ್ ಸೂಪರ್ ಮಾಸ್ಟರ್ ಸರಣಿ ಈ ವಾರಾಂತ್ಯದಲ್ಲಿ ನಡೆಯಲಿದೆ.