ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ 11 ದೂರು ಸಲ್ಲಿಸಿದ್ದರೂ ಕ್ರಮವಿಲ್ಲ : ಕಾಂಗ್ರೆಸ್ ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ
ಮತದಾನದ ಅಂಕಿ ಅಂಶ ನೀಡುವಲ್ಲಿ ವಿಳಂಬ | ಚುನಾವಣಾ ಆಯೋಗ ಭೇಟಿ ಮಾಡಿದ INDIA ಮೈತ್ರಿಕೂಟ
ಮೋದಿ , ಅಮಿತ್ ಶಾ , ಅಭಿಷೇಕ್ ಸಿಂಘ್ವಿ | PC : PTI
ಹೊಸದಿಲ್ಲಿ : “ನಾವು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ 11 ದೂರುಗಳನ್ನು ನೀಡಿದ್ದರೂ, ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಶೀಘ್ರವಾಗಿ ಉತ್ತರಿಸಬೇಕು” ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.
INDIA ಮೈತ್ರಿಕೂಟದ ಸದಸ್ಯರೊಂದಿಗೆ ಚುನಾವಣಾ ಆಯೋಗವನ್ನು ಭೇಟಿಯಾದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. “INDIA ಮೈತ್ರಿಕೂಟದ ಸದಸ್ಯರೊಂದಿಗೆ ಚುನಾವಣಾ ಆಯೋಗವನ್ನು ಭೇಟಿ ಮಾಡಿ ನಮ್ಮ ಆಕ್ಷೇಪಣೆಯನ್ನು ಸಲ್ಲಿಸಿದ್ದೇವೆ. ಮತದಾರರ ಶೇಕಡಾವಾರು ಪ್ರಮಾಣವನ್ನು ಪ್ರಕಟಿಸಲು 11 ದಿನಗಳ ವಿಳಂಬವಾಗುತ್ತಿದೆ. ಅಲ್ಲದೇ ಮತದಾರರ ಶೇಕಡಾವಾರು ಹೆಚ್ಚಳವು ಹೆಚ್ಚು ಆತಂಕಕಾರಿಯಾಗಿದೆ. ನಾವು ಇದನ್ನು 2019 ರ ಚುನಾವಣೆಯೊಂದಿಗೆ ಹೋಲಿಸಿ ನೋಡಿದರೆ, ಈ ಅಂಕಿ ಅಂಶಗಳಲ್ಲಿ ಅಂತಹ ಏರಿಕೆ ಕಂಡುಬಂದಿಲ್ಲ. ಅಂಕಿ ಅಂಶಗಳನ್ನು ಶೀಘ್ರದಲ್ಲೇ ಪ್ರಕಟಿಸಿದರೆ, ಊಹಾಪೋಹಗಳು ಉದ್ಭವಿಸುವುದಿಲ್ಲ. ಅಂಕಿ ಅಂಶಗಳನ್ನು ಶೀಘ್ರವಾಗಿ ಪ್ರಕಟಿಸುವಂತಾಗಬೇಕು” ಎಂದು ಅವರು ಹೇಳಿದರು.