ರಾಜಸ್ಥಾನ ಸರಕಾರದ ವಸತಿ ಯೋಜನೆಯಿಂದ ಬೊಕ್ಕಸಕ್ಕೆ 1140 ಕೋಟಿ ರೂ. ನಷ್ಟ: ಸಂಪುಟ ಸಚಿವ ಕಿರೋಡಿ ಲಾಲ್ ಮೀನಾ ಆರೋಪ
►ರಾಜಸ್ಥಾನ ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟು? ►ಭಜನ್ಲಾಲ್ ಶರ್ಮಾ ಸರಕಾರಕ್ಕೆ ಇರಿಸುಮುರಿಸು
ಕಿರೋಡಿ ಲಾಲ್ ಮೀನಾ | PC : NDTV
ಜೈಪುರ: ಅಧಿಕಾರಕ್ಕೇರಿ ಆರು ತಿಂಗಳಷ್ಟೇ ಆಗಿರುವ ರಾಜಸ್ಥಾನದ ಭಜನ್ ಶರ್ಮಾ ನೇತೃತ್ವದ ಬಿಜೆಪಿ ಸರಕಾರವು ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮುಖ್ಯಮಂತ್ರಿಯವರ ಅಧೀನದಲ್ಲಿರುವ ಇಲಾಖೆಯು ನಿರ್ವಹಿಸುತ್ತಿರುವ ಬೃಹತ್ ವಸತಿ ಯೋಜನೆಯಲ್ಲಿ ಉಂಟಾಗಿರುವ ಲೋಪಗಳ ಬಗ್ಗೆ ಸಂಪುಟದ ಸಚಿವರೇ ಧ್ವನಿಯೆತ್ತಿರುವುದು ರಾಜ್ಯ ಸರಕಾರಕ್ಕೆ ಮುಜುಗರ ಸೃಷ್ಟಿಸಿದೆ.
ಜೈಪುರದ ಗಾಂಧಿನಗರ ಪ್ರದೇಶದ ನಿರ್ಮಿಸಲಾಗುತ್ತಿರುವ ವಸತಿ ಸಂಕೀರ್ಣ ಯೋಜನೆಯಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ 1146 ಕೋಟಿ ನಷ್ಟವುಂಟಾಗಲಿದೆಯೆಂದು ಹಿರಿಯ ಬಿಜೆಪಿ ನಾಯಕ ಹಾಗೂ ಕೃಷಿ ಸಚಿವ ಕಿರೋಡಿ ಲಾಲ್ ಮೀನಾ ಆಪಾದಿಸಿದ್ದಾರೆ.
ಮುಖ್ಯಮಂತ್ರಿಯವರ ಅಧೀನದಲ್ಲಿರುವ ಸಾಮಾನ್ಯ ಆಡಳಿತ ಇಲಾಖೆ (ಜಿಎಡಿ)ಯು ಸಂಪುಟದ ಅನುಮೋದನೆಯಿಲ್ಲದೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ಆಪಾದಿಸಿದ ಮೀನಾ, ಕೂಡಲೇ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಿಎಡಿಯು ಈಗ ಇರುವ ಹಳೆಯ ಎಂಆರ್ಇಸಿ ಕ್ಯಾಂಪಸ್ ಕಟ್ಟಡಗಳನ್ನು ನಾಶಪಡಿಸಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುವ ಯೋಜನೆಯನ್ನು ಹೊಂದಿದೆ. ಐದು ವರ್ಷಗಳ ಹಿಂದೆ ಈ ನಿವೇಶನದ ಮೌಲ್ಯವು ರೂ. 277 ಕೋಟಿಗಳಾಗಿದ್ದರೂ, ಈಗ ಅದರ ಮೌಲ್ಯವನ್ನು ಕಡಿಮೆಗೊಳಿಸಿ 218 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ. ಜಮೀನಿನ ಮೀಸಲು ಬೆಲೆಯು ಪ್ರಸಕ್ತ 25 ಸಾವಿರ ರೂ.ಗಳಾಗಿದ್ದರೂ, ಅದನ್ನು 8 ಸಾವಿರ ಚದರ ಅಡಿಗೆ ನೀಡಲಾಗಿದೆ. ಇದರಿಂದಾಗಿ ರಾಜ್ಯ ಸರಕಾರಕ್ಕೆ ಪ್ರತಿ ಚದರ ಅಡಿಗೆ 17 ಸಾವಿರ ರೂ. ನಷ್ಟವಾಗಲಿದೆ. ಈ ವಸತಿ ಸಂಕೀರ್ಣ ಯೋಜನೆಯಡಿ ರಾಜ್ಯ ಸರಕಾರವು ಮೂರನೇ ಒಂದರಷ್ಟು ಫ್ಲ್ಯಾಟ್ಗಳನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಡಿ ಖಾಸಗಿಯವರಿಗೆ ನೀಡಲಿದೆ ಎಂದು ಮೀನಾ ತಿಳಿಸಿದ್ದಾರೆ. ಇವೆಲ್ಲಾ ಸೇರಿಸಿದರೆ ರಾಜ್ಯದ ಬೊಕ್ಕಸಕ್ಕೆ 1146 ಕೋಟಿ ರೂ. ನಷ್ಟವುಂಟಾಗಲಿದೆ ಎಂದು ಮೀನಾ ಹೇಳಿದ್ದಾರೆ.
ಹಿರಿಯ ಸಚಿವರಾದ ಕಿರೋಡಿ ಲಾಲ್ ಮೀನಾ ಅವರು ತನ್ನದೇ ಸರಕಾರದ ನಿರ್ಧಾರಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವುದು ಇದು ಮೊದಲ ಸಲವೇನಲ್ಲ. ಪೂರ್ವ ರಾಜಸ್ಥಾನ ಕಾಲುವೆ ಯೋಜನೆಗಾಗಿನ ಜಮೀನು ಮಾರಾಟದಲ್ಲಿ ಭ್ರಷ್ಟಾಚಾರದ ನಡೆದಿರುವ ಬಗ್ಗೆ ಸುಳಿವು ನೀಡಿದ್ದರು. ಆನಂತರ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಕ್ರಮ ಕೈಗೊಂಡಿದ್ದರು.
ವಿಧಾನಸಭಾ ಚುನಾವಣೆಗೆ ಮುನ್ನ ಮೀನಾ ಅವರು ರಾಜ್ಯಸಭಾ ಸದಸ್ಯರಾಗಿದ್ದರು ಮತ್ತು ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಶೋಕ್ ಗೆಹ್ಲೊಟ್ ನೇತೃತ್ವದ ಕಾಂಗ್ರೆಸ್ ಸರಕಾರದ ಚುನಾವಣೆಯಲ್ಲಿ ಸೋತ ನಂತರ ಆಚ್ಚರಿಯ ಆಯ್ಕೆಯೆಂಬಂತೆ ಬಿಜೆಪಿಯು ಭಜನ್ಲಾಲ್ ಶರ್ಮಾ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಿತು.
ಮೀನಾ ಅವರು ತನಗೆ ನೀಡಲಾದ ಖಾತೆಗಳ ಬಗ್ಗೆ ಅಸಮಾಧಾನ ಹೊಂದಿದ್ದಾರೆನ್ನಲಾಗಿದೆ ಹಾಗೂ ದೌಸಾ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ತನ್ನ ಸೋದರನಿಗೆ ದೊರೆಯಲು ಪ್ರಯತ್ನಿಸಿದ್ದು. ಆದರೆ ಅದನ್ನು ಕನ್ಹಯ್ಯಾ ಲಾಲ್ ಮೀನಾ ಅವರಿಗೆ ನೀಡಲಾಗಿತ್ತು.