ರಾಜ್ಯಸಭೆಯ ಶೇ. 12 ಸದಸ್ಯರು ಕೊಟ್ಯಧಿಪತಿಗಳು; ವರದಿ
ಸಾಂದರ್ಭಿಕ ಚಿತ್ರ.| Photo: PTI
ಹೊಸದಿಲ್ಲಿ: ರಾಜ್ಯ ಸಭೆಯ ಶೇ. 12 ಸದಸ್ಯರು ಕೋಟ್ಯಧಿಪತಿಗಳು. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಕೋಟ್ಯಧಿಪತಿ ಸದಸ್ಯರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ ಎಂದು ದಿ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ADR) ವರದಿ ತಿಳಿಸಿದೆ. 225 ರಾಜ್ಯ ಸಭಾ ಸದಸ್ಯರಲ್ಲಿ 233 ಸದಸ್ಯರ ಕ್ರಿಮಿನಲ್, ಆರ್ಥಿಕ ಹಾಗೂ ಇತರ ಹಿನ್ನಲೆಯನ್ನು ದಿ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ADR) ಹಾಗೂ ನ್ಯಾಷನಲ್ ಇಲೆಕ್ಷನ್ ವಾಚ್ (NEW) ವಿಶ್ಲೇಷಿಸಿದೆ ಹಾಗೂ ಪರಿಸ್ಕರಿಸಿದೆ. ಇದರ ವರದಿಯ ಪ್ರಕಾರ ಆಂಧ್ರಪ್ರದೇಶದಲ್ಲಿ 11ರಲ್ಲಿ 5 (ಶೇ. 45) ಸಂಸದರು, ತೆಲಂಗಾಣದಲ್ಲಿ 7ರಲ್ಲಿ 3 (ಶೇ. 43) ಸಂಸದರು, ಮಹಾರಾಷ್ಟ್ರದಲ್ಲಿ 19ರಲ್ಲಿ 3 (ಶೇ. 16) ಸಂಸದರು, ದಿಲ್ಲಿಯಲ್ಲಿ 3ರಲ್ಲಿ ಓರ್ವ (ಶೇ. 33) ಸಂಸದ, ಪಂಜಾಬ್ನಲ್ಲಿ 7ರಲ್ಲಿ ಇಬ್ಬರು (ಶೇ.29) ಸಂಸದರು, ಹರ್ಯಾಣದಲ್ಲಿ 5ರಲ್ಲಿ ಓರ್ವ (ಶೇ. 20) ಸಂಸದ, ಮಧ್ಯಪ್ರದೇಶದಲ್ಲಿ 11ರಲ್ಲಿ ಇಬ್ಬರು (ಶೇ. 18) ಸಂಸದರು ತಮ್ಮ ಸೊತ್ತಿನ ಮೌಲ್ಯ 100 ಕೋ.ರೂ.ಗಿಂತ ಅಧಿಕ ಇದೆ ಎಂದು ಘೋಷಿಸಿದ್ದಾರೆ.
ತೆಲಂಗಾಣದ 7 ಸಂಸದರ ಒಟ್ಟು ಸೊತ್ತಿನ ಮೌಲ್ಯ 5,596 ಕೋ.ರೂ., ಆಂಧ್ರಪ್ರದೇಶದ 11 ಸಂಸದರ ಒಟ್ಟು ಸೊತ್ತಿನ ಮೌಲ್ಯ 3,823 ಕೋ.ರೂ., ಉತ್ತರಪ್ರದೇಶದ 30 ಸಂಸದರ ಒಟ್ಟು ಸೊತ್ತಿನ ಮೌಲ್ಯ 1,941 ಕೋ.ರೂ. ರಾಜ್ಯ ಸಭೆಯ ಒಟ್ಟು 225ರಲ್ಲಿ 75 (ಶೇ.33) ಸದಸ್ಯರು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. 41 (ಶೇ. 18) ಸದಸ್ಯರು ಗಂಭೀರ ಅಪರಾಧ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಇಬ್ಬರು ಸದಸ್ಯರು ಹತ್ಯೆ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ನಾಲ್ವರು ಸದಸ್ಯರು ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ.