ಮಧ್ಯ ಪ್ರದೇಶ: 12ರ ಹರೆಯದ ಬಾಲಕಿಯ ಅತ್ಯಾಚಾರ, ನೆರವು ಕೇಳಿದವಳನ್ನು ಓಡಿಸಿದ ಸ್ಥಳೀಯರು
ಸಾಂದರ್ಭಿಕ ಚಿತ್ರ
ಉಜ್ಜಯಿನಿ: 12ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ಇಲ್ಲಿಗೆ ಸಮೀಪದ ಬಾಡನಗರದಲ್ಲಿ ನಡೆದಿದೆ. ಅರೆಬೆತ್ತಲಾಗಿದ್ದ, ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಬಾಲಕಿ ನೆರವು ಕೋರಿ ಅಲ್ಲಿಯ ಮನೆಗಳಿಗೆ ತೆರಳಿದ್ದಳು. ಆದರೆ ಜನರು ಆಕೆಗೆ ನೆರವಾಗಲು ನಿರಾಕರಿಸಿದ್ದರು. ಓರ್ವ ವ್ಯಕ್ತಿಯಂತೂ ಆಕೆಯನ್ನು ಅಲ್ಲಿಂದ ಓಡಿಸಿದ್ದ. ಇವೆಲ್ಲ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.
ಬೀದಿಗಳಲ್ಲಿ ಅಲೆದಾಡುತ್ತಿದ್ದ ಬಾಲಕಿ ಕೊನೆಗೂ ಆಶ್ರಮವೊಂದನ್ನು ತಲುಪಿದ್ದಳು. ಅಲ್ಲಿಯ ಗುರುಗಳು ಲೈಂಗಿಕ ದೌರ್ಜನ್ಯವನ್ನು ಶಂಕಿಸಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯಕೀಯ ತಪಾಸಣೆಯು ಆಕೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ದೃಢಪಡಿಸಿದೆ.
ಬಾಲಕಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದರಿಂದ ಆಕೆಯನ್ನು ಇಂದೋರ್ ಅಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಕ್ತ ಅಗತ್ಯವಾಗಿದ್ದಾಗ ಪೋಲಿಸ್ ಸಿಬ್ಬಂದಿಗಳೇ ರಕ್ತದಾನ ಮಾಡಿದ್ದು, ಬಾಲಕಿಯ ದೇಹಸ್ಥಿತಿ ಈಗ ಸ್ಥಿರವಾಗಿದೆ ಎನ್ನಲಾಗಿದೆ.
ಬಾಲಕಿ ಎಷ್ಟೊಂದು ಆಘಾತಗೊಂಡಿದ್ದಾಳೆಂದರೆ ತನ್ನ ಹೆಸರು ಮತ್ತು ವಿಳಾಸವನ್ನು ಸ್ಪಷ್ಟವಾಗಿ ತಿಳಿಸಲೂ ಆಕೆಗೆ ಸಾಧ್ಯವಾಗುತ್ತಿಲ್ಲ. ಆದರೆ ಆಕೆಯ ಮಾತಿನ ಶೈಲಿ ಆಕೆ ಉತ್ತರ ಪ್ರದೇಶದ ಪ್ರಯಾಗರಾಜ್ ನಿವಾಸಿಯಾಗಿರಬಹುದು ಎನ್ನುವುದನ್ನು ಸೂಚಿಸುತ್ತಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.
ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಅವರ ಬಂಧನಕ್ಕಾಗಿ ವಿಶೇಷ ತಂಡವೊಂದನ್ನು ರಚಿಸಿದ್ದಾರೆ.