122 ಕೋ.ರೂ.ವಂಚನೆ ಪ್ರಕರಣ | ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕಿನ ಮಾಜಿ ಸಿಇಒ ಬಂಧನ

PC : PTI
ಮುಂಬೈ: 122 ಕೋ.ರೂ.ವಂಚನೆ ಪ್ರಕರಣದಲ್ಲಿ ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕಿನ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಅಭಿಮನ್ಯು ಭೋವನ್ ಅವರನ್ನು ಮುಂಬೈ ಪೋಲಿಸ್ನ ಆರ್ಥಿಕ ಅಪರಾಧಗಳ ಘಟಕ(ಇಸಿಡಬ್ಲ್ಯು)ವು ಬಂಧಿಸಿದೆ.
ಇದು ಪ್ರಕರಣದಲ್ಲಿ ಮೂರನೇ ಬಂಧನವಾಗಿದೆ. ಬ್ಯಾಂಕಿನ ಜನರಲ್ ಮ್ಯಾನೇಜರ್ ಹಿತೇಶ ಮೆಹ್ತಾ ಅವರು ಬ್ಯಾಂಕಿನ ಭದ್ರತಾ ಕೊಠಡಿಯಲ್ಲಿದ್ದ 122 ಕೋ.ರೂ.ಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪಿಯಾಗಿದ್ದಾರೆ.
ಇಸಿಡಬ್ಲ್ಯು ಗುರುವಾರ ಮತ್ತು ಶುಕ್ರವಾರ ಭೋವನ್ರನ್ನು ವಿಚಾರಣೆಗೆ ಕರೆಸಿದ್ದು, ಅಪರಾಧದಲ್ಲಿ ಅವರ ಪಾತ್ರ ಸ್ವಷ್ಟಗೊಂಡ ಬಳಿಕ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಸಿಡಬ್ಲ್ಯು ಮೆಹ್ತಾ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಧರ್ಮೇಶ ಪೌನ್ ಅವರನ್ನು ಈಗಾಗಲೇ ಬಂಧಿಸಿದೆ.
ಆರ್ಬಿಐ ಬ್ಯಾಂಕಿನ ವ್ಯವಹಾರಗಳ ತಪಾಸಣೆ ನಡೆಸಿದ ಸಂದರ್ಭದಲ್ಲಿ ಹಣ ದುರ್ಬಳಕೆ ಬೆಳಕಿಗೆ ಬಂದಿತ್ತು.
ಗ್ರಾಹಕರು ಬ್ಯಾಂಕಿನಲ್ಲಿಯ ತಮ್ಮ ಠೇವಣಿಗಳನ್ನು ಹಿಂಪಡೆಯುವುದನ್ನು ಆರ್ಬಿಐ ನಿಷೇಧಿಸಿದೆ. ಆದರೆ ಕೆಲವು ಷರತ್ತುಗಳಿಗೆ ಒಳಪಟ್ಟು ಠೇವಣಿಗಳ ಮೇಲಿನ ಸಾಲಗಳನ್ನು ಚುಕ್ತಾ ಮಾಡಲು ಅವಕಾಶ ನೀಡಿದೆ. ಬ್ಯಾಂಕು ಸಿಬ್ಬಂದಿಗಳ ವೇತನ, ಬಾಡಿಗೆ ಮತ್ತು ವಿದ್ಯುಚ್ಛಕ್ತಿ ಬಿಲ್ಗಳ ಪಾವತಿಯನ್ನು ಮಾಡಬಹುದಾಗಿದೆ.
ಪೂರ್ವಾನುಮತಿಯಿಲ್ಲದೆ ಬ್ಯಾಂಕು ಹೊಸದಾಗಿ ಸಾಲ ನೀಡುವುದನ್ನು, ಸಾಲಗಳನ್ನು ಮತ್ತು ಮುಂಗಡಗಳನ್ನು ನವೀಕರಿಸುವುದನ್ನು,ಯಾವುದೇ ಹೂಡಿಕೆಯನ್ನು ಮಾಡುವುದನ್ನು, ಹೊಸದಾಗಿ ಠೇವಣಿಗಳನ್ನು ಸ್ವೀಕರಿಸುವುದನ್ನೂ ಆರ್ಬಿಐ ನಿಷೇಧಿಸಿದೆ.