ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಹಿತ 42 ಮಂದಿಗೆ 125 ಕೋ.ರೂ. ಬಹುಮಾನ ವಿತರಿಸಿದ ಬಿಸಿಸಿಐ
PC : PTI
ಹೊಸದಿಲ್ಲಿ: ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿರುವ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾವು ಇತ್ತೀಚೆಗೆ ಬಿಸಿಸಿಐಯಿಂದ 125 ಕೋ.ರೂ.ಬಹುಮಾನವನ್ನು ಸ್ವೀಕರಿಸಿದೆ. 15 ಆಟಗಾರರು, ಸಹಾಯಕ ಸಿಬ್ಬಂದಿ, ಮೀಸಲು ಆಟಗಾರರು ಸಹಿತ ಒಟ್ಟು 42 ಮಂದಿ ಜಾಗತಿಕ ಕ್ರಿಕೆಟ್ ಸ್ಪರ್ಧೆಗಾಗಿ ಅಮೆರಿಕ ಹಾಗೂ ವೆಸ್ಟ್ಇಂಡೀಸ್ ಗೆ ಪ್ರಯಾಣಿಸಿದ್ದರು. ಬಿಸಿಸಿಐ 125 ಕೋ.ರೂ. ಬಹುಮಾನವನ್ನು ಆಟಗಾರರಿಗೆ ಮಾತ್ರವಲ್ಲ ಸಹಾಯಕ ಸಿಬ್ಬಂದಿಗಳು ಸೇರಿದಂತೆ 42 ಸದಸ್ಯರ ತಂಡಕ್ಕೂ ವಿತರಿಸಿದೆ.
ಇಂಡಿಯನ್ ಎಕ್ಸ್ಪ್ರೆಸ್ ನ ವರದಿಯ ಪ್ರಕಾರ ಒಂದೂ ಪಂದ್ಯವನ್ನು ಆಡದ ಮೂವರು ಆಟಗಾರರಾದ ಯಶಸ್ವಿ ಜೈಸ್ವಾಲ್, ಯಜುವೇಂದ್ರ ಚಹಾಲ್ ಹಾಗೂ ಸಂಜು ಸ್ಯಾಮ್ಸನ್ ಸೇರಿದಂತೆ ಭಾರತದ 15 ಸದಸ್ಯರುಗಳಿಗೆ ತಲಾ 5 ಕೋ.ರೂ. , ಮುಖ್ಯಕೋಚ್ ರಾಹುಲ್ ದ್ರಾವಿಡ್ ಗೆ 5 ಕೋ.ರೂ. ಬಹುಮಾನ ವಿತರಿಸಲಾಗಿದೆ.
ದ್ರಾವಿಡ್ ಅವರ ಕೋಚಿಂಗ್ ಸಿಬ್ಬಂದಿಗಳಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಫೀಲ್ಡಿಂಗ್ ಕೋಚ್ ದಿಲಿಪ್ ಹಾಗೂ ಬೌಲಿಂಗ್ ಕೋಚ್ ಪರಾಸ್ ಮ್ಹಾಬ್ರೆ ತಲಾ 2.5 ಕೋ.ರೂ. ಪಡೆದಿದ್ದಾರೆ. ಅಜಿತ್ ಅಗರ್ಕರ್ ಅಧ್ಯಕ್ಷತೆಯ ಬಿಸಿಸಿಐ ಸೀನಿಯರ್ ಆಯ್ಕೆ ಸಮಿತಿಯ ಐವರು ಸದಸ್ಯರುಗಳಿಗೆ ತಲಾ 1 ಕೋ.ರೂ. ವಿತರಿಸಲಾಗಿದೆ.
ಸಹಾಯಕ ಸಿಬ್ಬಂದಿಗಳ ಪೈಕಿ ಮೂವರು ಫಿಸಿಯೋಗಳು, ಮೂವರು ಥ್ರೋಡೌನ್ ಸ್ಪೆಷಲಿಸ್ಟ್ ಗಳು, ಇಬ್ಬರು ಮಸಾಜ್ ಪರಿಣತರು ಹಾಗೂ ಸ್ಟ್ರೆಂತ್ ಹಾಗೂ ಕಂಡೀಶನಿಂಗ್ ಕೋಚ್ ಸೊಹಮ್ ದೇಸಾಯಿಗೆ ತಲಾ 2 ಕೋ.ರೂ. ನೀಡಲಾಗಿದೆ.
ಬಿಸಿಸಿಐ ಆಯ್ಕೆ ಸಮಿತಿಯು ಟಿ20 ವಿಶ್ವಕಪ್ ಗೆ 15 ಸದಸ್ಯರ ತಂಡದ ಜೊತೆಗೆ ನಾಲ್ವರು ಮೀಸಲು ಆಟಗಾರರನ್ನು ನೇಮಿಸಿತ್ತು. ಮೀಸಲು ಆಟಗಾರರಾದ ರಿಂಕು ಸಿಂಗ್, ಶುಭಮನ್ ಗಿಲ್, ಅವೇಶ್ ಖಾನ್ ಹಾಗೂ ಖಲೀಲ್ ಅಹ್ಮದ್ ಗೆ ತಲಾ 1 ಕೋ.ರೂ. ಬಹುಮಾನ ನೀಡಲಾಗಿದೆ.
ವಿಶ್ವಕಪ್ ನಲ್ಲಿ ವೀಡಿಯೊ ಅನಾಲಿಸ್ಟ್ ಹಾಗೂ ಬಿಸಿಸಿಐ ಸ್ಟಾಫ್ ಸದಸ್ಯರುಗಳಿಗೂ ಬಹುಮಾನ ಮೊತ್ತವನ್ನು ಹಂಚಲಾಗಿದೆ ಎಂದು ವರದಿ ತಿಳಿಸಿದೆ.
ಟೀಮ್ ಇಂಡಿಯಾವು ಸ್ವದೇಶಕ್ಕೆ ವಾಪಸಾದ ನಂತರ ಮಹಾರಾಷ್ಟ್ರ ಸಿಎಂಬ ಏಕನಾಥ್ ಶಿಂದೆ ಅವರು ತಂಡಕ್ಕೆ 11 ಕೋ.ರೂ. ಬಹುಮಾನ ಪ್ರಕಟಿಸಿದ್ದರು.
ಭಾರತವು ಒಂದೂ ಪಂದ್ಯವನ್ನು ಸೋಲದೆ ಜೂನ್ 29ರಂದು ಬಾರ್ಬಡೋಸ್ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ ನಿಂದ ಸೋಲಿಸಿ ಟಿ20 ವಿಶ್ವಕಪ್ ಅನ್ನು ಗೆದ್ದುಕೊಂಡಿತ್ತು.