14 ಟ್ರಿಲಿಯನ್ ಆರ್ಥಿಕತೆಯ ಕೊಡುಗೆ ನೀಡಬೇಕಾದರೆ 40 ಕೋಟಿ ಮಹಿಳಾ ಶ್ರಮಿಕ ಶಕ್ತಿಯ ಸೇರ್ಪಡೆ ಅಗತ್ಯ: ವರದಿ
ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ಆರ್ಥಿಕತೆಗೆ 14 ಟ್ರಿಲಿಯನ್ ಡಾಲರ್ನ ಕೊಡುಗೆ ನೀಡಲು ಭಾರತಕ್ಕೆ 40 ಕೋಟಿ ಹೆಚ್ಚುವರಿ ಮಹಿಳಾ ಶ್ರಮಿಕ ಶಕ್ತಿಯ ಅಗತ್ಯವಿದೆ. 2047ರ ವಿತ್ತ ವರ್ಷದೊಳಗೆ ಭಾರತವು 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವಾಗುವ ಗುರಿಯನ್ನು ಸಾಧಿಸಬೇಕಾದರೆ, ಅದು ಹಾಲಿ ಮಹಿಳಾ ಕಾರ್ಮಿಕ ಶಕ್ತಿಯ ಪಾಲ್ಗೊಳ್ಳುವಿಕೆಯ ದರವನ್ನು ಶೇ.37ರಿಂದ ಶೇ.70ಕ್ಕೆ ಹೆಚ್ಚಿಸಬೇಕಾಗಿದೆ ಎಂದು ನೂತನ ವರದಿಯೊಂದು ತಿಳಿಸಿದೆ.
ಲಾಭೋದ್ದೇಶರ ರಹಿತ ಸಂಸ್ಥೆ ‘ದಿ ನಡ್ಜ್ ಇನ್ಸ್ಟಿಟ್ಯೂಟ್’ ಅನಾವರಣಗೊಳಿಸಿದ ‘ಲೇಬರ್ ಫೋರ್ಸ್ ಪಾರ್ಟಿಸಿಪೇಶನ್ ಡಿಸ್ಟಿಲೇಶನ್’ ವರದಿಯಲ್ಲಿ ಭಾರತದ ಆರ್ಥಿಕತೆಯ ಭವಿಷ್ಯಕ್ಕಾಗಿ ನಿರ್ಣಾಯಕ ಅಂಶಗಳನ್ನು ರೂಪಿಸಿದೆ. ಹಲವಾರು ವರ್ಷಗಳ ನಿಯತಕಾಲಿಕ ಕಾರ್ಮಿಕ ಶಕ್ತಿ ಸರ್ವೇಕ್ಷಣೆ (ಪಿಎಲ್ಎಫ್ಎಸ್)ಯನ್ನು ಈ ವರದಿಯು ಆಧರಿಸಿದೆ.
2047ರೊಳಗೆ ಭಾರತವು 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗುವ ಗುರಿಯನ್ನು ಸಾಧಿಸಬೇಕಾದರ ಮಹಿಳಾ ಕಾರ್ಮಿಕ ಶಕ್ತಿಯ ಪಾಲ್ಗೊಳ್ಳುವಿಕೆಯಲ್ಲಿ ಗಣನೀಯ ಹೆಚ್ಚಳವಾಗಬೇಕೆಂದು ವರದಿ ಪ್ರತಿಪಾದಿಸಿದೆ.
ದೇಶದ ಆರ್ಥಿಕತೆಗೆ 14 ಟ್ರಿಲಿಯನ್ ಡಾಲರ್ಗಳ ಕೊಡುಗೆಯನ್ನು ನೀಡಬೇಕಾದರೆ ಭಾರತವು ಹೆಚ್ಚುವರಿಯಾಗಿ 40 ಕೋಟಿ ಮಹಿಳೆಯರನ್ನು ಶ್ರಮಿಕ ಶಕ್ತಿಗೆ ಸೇರ್ಪಡೆಗೊಳಿಸುವ ಅಗತ್ಯವಿದೆ. ಇದಕ್ಕಾಗಿ ಹಾಲಿ ಮಹಿಳಾ ಕಾರ್ಮಿಕ ಶಕ್ತಿಯ ಪಾಲ್ಗೊಳ್ಳುವಿಕೆಯ ದರ (ಎಲ್ಎಫ್ಪಿಆರ್) ಅನ್ನು 2047ರೊಳಗೆ ಶೇ.37ರಿಂದ ಶೇ.70ಕ್ಕೆ ಏರಿಸಬೇಕಾಗಿದೆ.
ಆ ಅವಧಿಯಲ್ಲಿ ಕೇವಲ 11 ಕೋಟಿ ಮಹಿಳೆಯರು ಕಾರ್ಮಿಕ ಶಕ್ತಿಗೆ ಸೇರ್ಪಡೆಗೊಳ್ಳಲಿದ್ದಾರಂದು ಅಂದಾಜಿಸಲಾಗಿದೆ. ಆದರೆ 14 ಟ್ರಿಲಿಯನ್ ಆರ್ಥಿಕತೆಯ ದೇಶವಾಗಬೇಕಾದರೆ ಹೆಚ್ಚುವರಿಯಾಗಿ 14.50 ಕೋಟಿ ಮಹಿಳೆಯರು ಕಾರ್ಮಿಕ ಶಕ್ತಿಗೆ ಸೇರ್ಪಡೆಗೊಳ್ಳಬೇಕಾಗಿದೆಯೆಂದು ವರದಿ ಹೇಳಿದೆ.
ಉದ್ಯೋಗ ಭದ್ರತೆ ಹಾಗೂ ಉದ್ಯೋಗ ಮರಳಿ ಗಳಿಸುವಿಕೆಯ ವಿಷಯದಲ್ಲಿ ಪುರುಷರು ಹಾಗೂ ಮಹಿಳೆಯರ ನಡುವೆ ಭಾರೀ ವ್ಯತ್ಯಾಸ ಕಂಡುಬರುತ್ತಿದೆಯೆಂದು ವರದಿ ತಿಳಿಸಿದೆ.
ಮಹಿಳೆಯರು ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆ ಪುರುಷರಿಗಿಂತ ಏಳು ಪಟ್ಟು ಅಧಿಕವಾಗಿದೆ ಹಾಗೂ ಉದ್ಯೋಗನಷ್ಟದಿಂದ ಚೇತರಿಸಿಕೊಂಡು ಮರು ಉದ್ಯೋಗವನ್ನು ಪಡೆಯದೆ ಇರುವ ಸಾಧ್ಯತೆ ಪುರುಷರಿಗಿಂತ 11 ಪಟ್ಟು ಅಧಿಕವಾಗಿದೆ. 2019ರಲ್ಲಿ ಉದ್ಯೋಗದಲ್ಲಿದ್ದ ಮಹಿಳೆಯರ ಪೈಕಿ ಸುಮಾರು ಅರ್ಧಕ್ಕರ್ಧದಷ್ಟು ಮಂದಿ ಶ್ರಮಿಕಶಕ್ತಿಯನ್ನು ತೊರೆದಿದ್ದಾರೆಂದು ವರದಿ ಹೇಳಿದೆ.
ಮಹಿಳೆಯರು ಪ್ರಮುಖವಾಗಿ ಕೃಷಿ ಮತ್ತಿತರ ಕಡಿಮೆ ಉತ್ಪಾದಕತೆಯ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಮಹಿಳೆಯರು ಒಟ್ಟು ಕಾರ್ಮಿಕ ಶಕ್ತಿಯ ಶೇ.12ರಷ್ಟಿದ್ದಾರೆ. ಆದರೆ ಅವರು ಕೌಶಲ್ಯರಹಿತ ಕೆಲಸಗಳಲ್ಲಿ ಪುರುಷರಿಗಿಂತ ಕಡಿಮೆ ವೇತನವನ್ನು ಪಡೆಯುತ್ತಾರೆ.
ಈ ಎಲ್ಲಾ ಸವಾಲುಗಳನ್ನು ನಿಭಾಯಿಸಲು ಮಹಿಳಾ ಕಾರ್ಮಿಕ ಶಕ್ತಿಯ ಪಾಲ್ಗೊಳ್ಳುವಿಕೆಯನ್ನು ವರದಿಯು ಮೂರು ಮುಖ್ಯ ಮಾರ್ಗೋಪಾಯಗಳನ್ನು ರೂಪಿಸಿದೆ.
ಡಿಜಿಟಲ್ ಮೈಕ್ರೋವರ್ಕ್ ಹಾಗೂ ಪ್ಲ್ಯಾಟ್ಫಾರಂ ಜಾಬ್ಗಳ ಮೂಲಕ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು, ಡಿಜಿಟಲ್ ವಾಣಿಜ್ಯ ಮೂಲಸೌಕರ್ಯಗಳ ಮೂಲಕ ಔದ್ಯಮಿಕ ಅವಕಾಶಗಳನ್ನು ಅಧಿಕಗೊಳಿಸುವುದು ಹಾಗೂ ಚಲನಶೀಲತೆ ಹಾಗೂ ಡಿಜಿಟಲ್ಸಂಪರ್ಕದಂತಹ ಅಡೆತಡೆಗಳನ್ನು ನಿಭಾಯಿಸುವುದು ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಸುಧಾರಿಸುವಲ್ಲಿ ನಿರ್ಣಾಯಕವಾಗಿದೆ ಎಂದು ವರದಿ ಹೇಳಿದೆ.