1,435 ಕೋಟಿ ರೂ. ಯೋಜನೆ ʼಪ್ಯಾನ್ 2.0ʼ ವಿವರಗಳನ್ನು ಬಹಿರಂಗಪಡಿಸಿ : ಟಿಎಂಸಿ ಸಂಸದ ಸಾಕೇತ್ ಗೋಖಲೆ ಆಗ್ರಹ
ಸಾಕೇತ್ ಗೋಖಲೆ | PC : PTI
ಹೊಸದಿಲ್ಲಿ : ಪ್ಯಾನ್ ಕಾರ್ಡ್ 2.0 ಯೋಜನೆಯ ವಿವರಗಳು, ಅದರ ಅಗತ್ಯತೆ ಮತ್ತು ಗುತ್ತಿಗೆದಾರರ ಗುರುತನ್ನು ಬಹಿರಂಗಪಡಿಸುವಂತೆ ಸಂಸದ ಸಾಕೇತ್ ಗೋಖಲೆ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಆಗ್ರಹಿಸಿದ್ದಾರೆ.
ಕೇಂದ್ರ ಸರಕಾರವು ಹೊಸದಾಗಿ ʼಪ್ಯಾನ್ 2.0ʼ ಯೋಜನೆ ಘೋಷಿಸಿದೆ. ಈ ಯೋಜನೆಯನ್ವಯ 78 ಕೋಟಿ ಭಾರತೀಯರು ಅಸ್ತಿತ್ವದಲ್ಲಿರುವ ತನ್ನ ಪ್ಯಾನ್ ಕಾರ್ಡ್ ಗಳನ್ನು ಕ್ಯೂ ಆರ್ ಕೋಡ್ ನೊಂದಿಗೆ ಹೊಸ ಆವೃತ್ತಿಗೆ ಅಪ್ ಗ್ರೇಡ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಯೋಜನೆಗೆ 1435 ಕೋಟಿ ರೂ. ಮೊತ್ತ ಅಂದಾಜಿಸಿರುವ ಕ್ರಮದ ಕುರಿತು ಟಿಎಂಸಿ ರಾಜ್ಯಸಭಾ ಸಂಸದ ಸಾಕೇತ್ ಗೋಖಲೆ ಕಳವಳ ವ್ಯಕ್ತಪಡಿಸಿದ್ದಾರೆ.
2020 ರಲ್ಲಿ ತಮಗೆ ನೀಡಲಾಗಿರುವ ಪ್ಯಾನ್ ಕಾರ್ಡ್ನ ಫೋಟೋವನ್ನು ಹಂಚಿಕೊಂಡಿರುವ ಅವರು, ಅದರಲ್ಲಿ ಈಗಾಗಲೇ ಕ್ಯೂಆರ್ ಕೋಡ್ ಇರುವುದನ್ನು ಉಲ್ಲೇಖಿಸಿದ್ದಾರೆ. ಅದನ್ನು ಮತ್ತೆ ಅಪ್ಗ್ರೇಡ್ನ ಅಗತ್ಯತೆ ಏನು? ಅದಕ್ಕೆ ಬೇಕಾಗಿರುವ ಗಣನೀಯ ವೆಚ್ಚದ ಕುರಿತು ಅವರು ಪ್ರಶ್ನೆಯೆತ್ತಿದ್ದಾರೆ.
"2020 ರಲ್ಲಿ ನೀಡಲಾದ ಪ್ಯಾನ್ ಕಾರ್ಡ್ಗಳು ಈಗಾಗಲೇ ಕ್ಯೂಆರ್ ಕೋಡ್ಗಳನ್ನು ಹೊಂದಿವೆ. ಹೀಗಿದ್ದರೂ ಸರ್ಕಾರವು 1,435 ಕೋಟಿ ರೂ. ತೆರಿಗೆದಾರರ ಹಣವನ್ನು ನಿಖರವಾಗಿ ಯಾವುದಕ್ಕಾಗಿ ಖರ್ಚು ಮಾಡುತ್ತಿದೆ? ಈ ಯೋಜನೆಯಲ್ಲಿ ಹೊಸತು ಏನಿದೆ?" ಎಂದು ಗೋಖಲೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಯೋಜನೆಯನ್ನು 1,435 ಕೋಟಿ ರೂ.ಗೆ ಗುತ್ತಿಗೆ ಪಡೆದಿರು ಕಂಪೆನಿಯ ಬಗ್ಗೆ ಪಾರದರ್ಶಕತೆಯನ್ನು ಕೋರಿರುವ ಸಂಸದ ಸಾಕೇತ್ ಗೋಖಲೆ ಅವರು, ಇದಂದು "ಬಿಳಿ ಆನೆ" ಮತ್ತು "ಹಾಸ್ಯಾಸ್ಪದ ಗಿಮಿಕ್" ಎಂದು ವ್ಯಂಗ್ಯವಾಡಿದ್ದಾರೆ.
ಮಧ್ಯಮ ವರ್ಗದ ನಾಗರಿಕರು ಹೆಚ್ಚಿನ ತೆರಿಗೆಯಿಂದ ತಮ್ಮ ಮೇಲೆ ಬರೆ ಎಳೆದುಕೊಳ್ಳುತ್ತಿರುವಾಗ ಈಗಾಗಲೇ 78 ಕೋಟಿ ಪ್ಯಾನ್ ಹೊಂದಿರುವವರಿಗೆ ಮತ್ತೆ ಮತ್ತಷ್ಟು ಸಂಕಷ್ಟ ನೀಡಲಿರುವ ಈ ಕ್ರಮವನ್ನು ಅವರು ಟೀಕಿಸಿದ್ದಾರೆ.