ಶ್ರೀಲಂಕಾ ಸಂಘರ್ಷ ಅಂತ್ಯಗೊಂಡು 15 ವರ್ಷ | ನ್ಯಾಯಕ್ಕಾಗಿ ಕಾಯುತ್ತಿರುವ ಯುದ್ಧಾಪರಾಧಗಳ ಸಂತ್ರಸ್ತರು
PC : scroll.in
ಹೊಸದಿಲ್ಲಿ : ಶ್ರೀಲಂಕಾದಲ್ಲಿ ಎಲ್ಟಿಟಿಇ ಮತ್ತು ಸರಕಾರದ ನಡುವಿನ 26 ವರ್ಷಗಳ ಸುದೀರ್ಘ ಕಾಲ ನಡೆದಿದ್ದ ಯುದ್ಧವು ಕೊನೆಗೂ 2009, ಮೇ 18ರಂದು ಅಂತ್ಯಗೊಂಡಿತ್ತು. ಅದಾಗಿ 15 ವರ್ಷಗಳಾಗಿದ್ದರೂ ಯುದ್ಧಾಪರಾಧಗಳ ಸಂತ್ರಸ್ತರಿಗೆ ಇನ್ನೂ ನ್ಯಾಯ ಲಭಿಸಿಲ್ಲ.
ಚಿತ್ರಹಿಂಸೆ, ಅತ್ಯಾಚಾರ, ಕಾನೂನುಬಾಹಿರ ಹತ್ಯೆಗಳು, ಬಲವಂತದ ನಾಪತ್ತೆಗಳು ಮತ್ತು ವಿವೇಚನಾರಹಿತ ದಾಳಿಗಳು ಸೇರಿದಂತೆ ಸರಕಾರಿ ಪಡೆಗಳು ನಡೆಸಿದ್ದ ದೌರ್ಜನ್ಯಗಳಿಗೆ ಇಂದಿಗೂ ಉತ್ತರದಾಯಿತ್ವವಿಲ್ಲ. ಎಲ್ಟಿಟಿಇಯ ಹೆಚ್ಚಿನ ಹಿರಿಯ ನಾಯಕರು ಯುದ್ಧದಲ್ಲಿ ಸಾವನ್ನಪ್ಪಿದ್ದರು ಅಥವಾ ಮರಣ ದಂಡನೆಗೊಳಗಾಗಿದ್ದರು. ಹೀಗಾಗಿ ಅವರು ನಡೆಸಿದ ಸಾಮೂಹಿಕ ಹತ್ಯೆಗಳು, ನಾಗರಿಕರ ಮೇಲೆ ಬಾಂಬ್ ದಾಳಿಗಳು, ಅಪಹರಣಗಳು ಮತ್ತು ಬಾಲಸೈನಿಕರ ಬಳಕೆಯಂತಹ ಅಪರಾಧಗಳಿಗೆ ಅವರು ಎಂದಿಗೂ ಕಾನೂನು ಕ್ರಮವನ್ನು ಎದುರಿಸುವುದಿಲ್ಲ.
ದಶಕಗಳ ಸಂಘರ್ಷದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಕೊಲ್ಲಲ್ಪಟ್ಟಿದ್ದರು. ಯುದ್ಧದ ಅಂತಿಮ ತಿಂಗಳುಗಳಲ್ಲಿ ಸುಮಾರು 40,000 ನಾಗರಿಕರು ಕೊಲ್ಲಲ್ಪಟ್ಟಿದ್ದರು ಎನ್ನುವುದು ವಿಶ್ವಸಂಸ್ಥೆಯ ತಜ್ಞರ ಸಮಿತಿಯು ನಡೆಸಿದ ಅಧ್ಯಯನವು ಬಹಿರಂಗಗೊಳಿಸಿದೆ. ಈ ಅವಧಿಯಲ್ಲಿ ವನ್ನಿ ಪ್ರದೇಶದಲ್ಲಿಯ ಎಲ್ಲ ಆಸ್ಪತ್ರೆಗಳು ಫಿರಂಗಿ ದಾಳಿಗಳಿಗೆ ಗುರಿಯಾಗಿದ್ದವು ಎಂದೂ ಅಧ್ಯಯನ ವರದಿಯು ಹೇಳಿದೆ.
ಸರಕಾರವು ಮಾನವೀಯ ನೆರವುಗಳನ್ನು ನಿರ್ಬಂಧಿಸಲು ಸಂಘರ್ಷ ವಲಯದಲ್ಲಿ ನಾಗರಿಕರ ಸಾವಿನ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕೀಳಂದಾಜಿತ್ತು. 2009, ಎಪ್ರಿಲ್ 8ರಂದು ಹಾಲಿನ ಪುಡಿಯನ್ನು ಪಡೆಯಲು ಸರದಿಯಲ್ಲಿ ಕಾಯುತ್ತಿದ್ದ ಮಹಿಳೆಯರು ಮತ್ತು ಮಕ್ಕಳು ಶೆಲ್ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದರು. ಎಲ್ಟಿಟಿಇ ತನ್ನ ನಿಯಂತ್ರಣದಲ್ಲಿದ್ದ ನಾಗರಿಕರನ್ನು ಮಾನವ ಗುರಾಣಿಗಳನ್ನಾಗಿ ಬಳಸಿಕೊಂಡಿತ್ತು. ಪರಾರಿಯಾಗಲು ಪ್ರಯತ್ನಿಸಿದ್ದ ಕುಟುಂಬಗಳತ್ತ ಗುಂಡಿನ ಸುರಿಮಳೆಗೈದಿತ್ತು ಮತ್ತು ನೆರವು ಪೂರೈಕೆಗಳನ್ನು ನಿರ್ಬಂಧಿಸಿತ್ತು.
ಯುದ್ಧದ ಬಳುವಳಿಯಾಗಿ ಶ್ರೀಲಂಕಾದಲ್ಲಿ ಶೋಷಣೆ, ನಿರ್ಭೀತಿ ಮತ್ತು ದುರಾಡಳಿತ ವಾಡಿಕೆಯಾಗಿದೆ ಮತ್ತು ಅದು ಈಗಲೂ ದೇಶವನ್ನು ದುರ್ಬಲಗೊಳಿಸುತ್ತಿದೆ ಮತ್ತು ದೇಶವನ್ನು ಕಾಡುತ್ತಿರುವ ಆರ್ಥಿಕ ಬಿಕ್ಕಟ್ಟಿಗೆ ನೇರವಾದ ಕೊಡುಗೆಯನ್ನು ನೀಡಿದೆ.
ಶ್ರೀಲಂಕಾದಲ್ಲಿ ಆಡಳಿತ ನಡೆಸಿದ ಸರಕಾರಗಳು ವರದಿಯಾಗಿರುವ ದೌರ್ಜನ್ಯಗಳ ತನಿಖೆಗಾಗಿ ಆಯೋಗಗಳ ಮೇಲೆ ಆಯೋಗಗಳನ್ನು ರಚಿಸಿವೆ. ಆದರೆ ವಾಸ್ತವದಲ್ಲಿ ತನಿಖೆಗಳಿಗೆ ತಡೆಯೊಡ್ಡಿವೆ ಮತ್ತು ದೌರ್ಜನ್ಯಗಳನ್ನು ನಡೆಸಿದವರಿಗೆ ರಕ್ಷಣೆ ನೀಡುತ್ತಿವೆ. ‘ನಾಪತ್ತೆಯಾಗಿರುವ’ ಸಾವಿರಾರು ಜನರ ಹಣೆಬರಹ ಏನಾಗಿದೆ ಎನ್ನುವುದು ಎಂದಿಗೂ ಬಹಿರಂಗಗೊಂಡಿಲ್ಲ ಮತ್ತು ಸತ್ಯವನ್ನು ತಿಳಿದುಕೊಳ್ಳಲು ಹೋರಾಟ ನಡೆಸುತ್ತಿರುವ ಅವರ ತಾಯಂದಿರು ಅಧಿಕಾರಿಗಳಿಂದ ಕಣ್ಗಾವಲು, ಕಿರುಕುಳ ಮತ್ತು ಬಂಧನಗಳನ್ನು ಎದುರಿಸುತ್ತಿದ್ದಾರೆ.
ಈ ನಡುವೆ ಯುದ್ಧಾಪರಾಧಗಳಲ್ಲಿ ಭಾಗಿಯಾಗಿದ್ದ ಹಿರಿಯ ಅಧಿಕಾರಿಗಳಿಗೆ ಬಡ್ತಿಗಳನ್ನು ನೀಡಲಾಗಿದೆ. ಉದಾಹರಣೆಗೆ ಹಾಲಿ ರಕ್ಷಣಾ ಕಾರ್ಯದರ್ಶಿಯಾಗಿರುವ ನಿವೃತ್ತ ಜನರಲ್ ಕಮಲ್ ಗುಣರತ್ನೆ ಅಂತಿಮ ಆಕ್ರಮಣದ ಸಂದರ್ಭದಲ್ಲಿ ಹಿರಿಯ ಕಮಾಂಡರ್ಗಳಲ್ಲಿ ಓರ್ವರಾಗಿದ್ದರು. ಗಂಭೀರ ದೌರ್ಜನ್ಯಗಳ ಆರೋಪದಲ್ಲಿ ಅಮೆರಿಕಕ್ಕೆ ಅವರ ಪ್ರಯಾಣವನ್ನು ನಿಷೇಧಿಸಲಾಗಿದೆ.
ಹೆಚ್ಚಿನ ಹೋರಾಟಗಳು ನಡೆದಿದ್ದ, ಪ್ರಮುಖವಾಗಿ ಶ್ರೀಲಂಕಾದ ತಮಿಳು ಉತ್ತರ ಮತ್ತು ಪೂರ್ವದಲ್ಲಿ ಈಗಲೂ ಹೆದ್ದಾರಿಗಳು ಸೇನಾ ಶಿಬಿರಗಳು ಮತ್ತು ತನಿಖಾ ಠಾಣೆಗಳನ್ನು ಹೊಂದಿವೆ. ಪ್ರತಿಭಟನೆಗಳನ್ನು ಹಿಂಸಾತ್ಮಕವಾಗಿ ದಮನಿಸುತ್ತಿರುವ ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳಿಗಾಗಿ ಮತ್ತು ಯುದ್ಧದಲ್ಲಿ ಮೃತ ತಮಿಳರ ಸ್ಮರಣೆಗೆ ಜನರನ್ನು ಕರಾಳ ಭಯೋತ್ಪಾದನೆ ನಿಗ್ರಹ ಕಾನೂನಿನಡಿ ಬಂಧಿಸುತ್ತಿದ್ದಾರೆ.
ಸರಕಾರಿ ಸಂಸ್ಥೆಗಳು ವಿವಿಧ ನೆಪಗಳನ್ನೊಡ್ಡಿ ತಮಿಳು ಮತ್ತು ಮುಸ್ಲಿಮ್ ಸಮುದಾಯಗಳಿಗೆ ಸೇರಿದ ಜಮೀನುಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಸಿಂಹಳೀಯ ಬೌದ್ಧ ಬಹುಸಂಖ್ಯಾತ ಸಮುದಾಯಗಳನ್ನು ನೆಲೆಗೊಳಿಸುತ್ತಿವೆ, ಹಿಂದು ದೇವಸ್ಥಾನಗಳ ನಿವೇಶನಗಳಲ್ಲಿ ಬೌದ್ಧ ಸ್ಮಾರಕಗಳನ್ನು ನಿರ್ಮಿಸುತ್ತಿದ್ದಾರೆ.
ಸೌಜನ್ಯ : scroll.in