10 ವರ್ಷಗಳಲ್ಲಿ 150 ಲಕ್ಷ ಕೋಟಿ ರೂ. ಸಾಲ ಹೆಚ್ಚಿಸಿದ ಪ್ರಧಾನಿ ಮೋದಿ: ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ | Photo: PTI
ಹೊಸದಿಲ್ಲಿ : ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ 14 ಲಕ್ಷ ಕೋಟಿ ರೂ. ಸಾಲ ಪಡೆಯುವ ಪ್ರಸ್ತಾವನೆ ಕುರಿತಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ನಿರುದ್ಯೋಗ, ಹಣದುಬ್ಬರ ಹಾಗೂ ಆರ್ಥಿಕ ಬಿಕ್ಕಟ್ಟಿನ ಹೊರೆ ಹೆಚ್ಚುತ್ತಿದೆ. ಆದರೆ ಸರಕಾರ ಜನರಿಗೆ ಪರಿಹಾರ ನೀಡುವ ಬದಲು, ಅವರನ್ನು ಸಾಲದ ಸುಳಿಯಲ್ಲಿ ಮುಳುಗಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ ತಿಂಗಳ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಪ್ರಿಲ್ 1ರಿಂದ ಆರಂಭವಾಗುವ ಮಂದಿನ ಹಣಕಾಸು ವರ್ಷದಲ್ಲಿ ಆದಾಯ ಕೊರತೆಯನ್ನು ಪೂರೈಸಲು ದಿನಾಂಕವನ್ನು ಹೊಂದಿದ ಸೆಕ್ಯುರಿಟಿಗಳನ್ನು ನೀಡುವ ಮೂಲಕ ಒಟ್ಟು 14,13 ಲಕ್ಷ ಕೋಟಿ ರೂ. ಮೊತ್ತದ ಸಾಲ ಪಡೆಯುವ ಬಗ್ಗೆ ಪ್ರಸ್ತಾವಿಸಿದ್ದರು.
‘ಎಕ್ಸ್’ನ ತನ್ನ ಹಿಂದಿ ಪೋಸ್ಟ್ ನಲ್ಲಿ ಪ್ರಿಯಾಂಕಾ ಗಾಂಧಿ, ‘‘ಪ್ರಸಕ್ತ ಹಣಕಾಸು ವರ್ಷದಲ್ಲಿ ಸರಕಾರ 14 ಲಕ್ಷ ಕೋಟಿ ರೂ.ಗೂ ಅಧಿಕ ಸಾಲ ಪಡೆಯಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಈ ಸಾಲವನ್ನು ಏಕೆ ಪಡೆಯುತ್ತಿದೆ?’’ ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯದ ನಂತರ 2014ರ ವರೆಗೆ 67 ವರ್ಷಗಳಲ್ಲಿ ದೇಶದ ಒಟ್ಟು ಸಾಲ 55 ಲಕ್ಷ ಕೋಟಿ ರೂ. ಆದರೆ, ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರ ಅದನ್ನು 205 ಲಕ್ಷ ಕೋಟಿ ರೂ. ಗೆ ಹೆಚ್ಚಿಸಿದೆ. ಮೋದಿ ಸರಕಾರ ಕಳೆದ 10 ವರ್ಷಗಳಲ್ಲಿ 150 ಲಕ್ಷ ಕೋಟಿ ರೂ. ಸಾಲ ಪಡೆದಿದೆ ಎಂದು ಅವರು ಹೇಳಿದ್ದಾರೆ.
‘‘ಇಂದು ದೇಶದ ಪ್ರತಿಯೊಬ್ಬ ಪ್ರಜೆ ಸರಾಸರಿ 1.5 ಲಕ್ಷ ರೂ. ಸಾಲವನ್ನು ಹೊಂದಿದ್ದಾನೆ. ಮೋದಿ ಸರಕಾರ ಮಾಡಿದ ಸಾಲದ ಹಣವನ್ನು ರಾಷ್ಟ್ರ ನಿರ್ಮಾಣದ ಯಾವ ಅಂಶಕ್ಕೆ ಬಳಸಲಾಗಿದೆ? ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಸಲಾಗಿದೆಯೇ? ರೈತರ ಆದಾಯ ದ್ವಿಗುಣಗೊಳಿಸಲಾಗಿದೆಯೇ ? ಶಾಲೆಗಳಿಗೆ ಮತ್ತು ಆಸ್ಪತ್ರೆಗೆ ಹೊಸ ರೂಪ ನೀಡಲಾಗಿದೆಯೇ? ಸಾರ್ವಜನಿಕ ವಲಯವನ್ನು ಬಲಪಡಿಸಲಾಗಿದೆಯೇ? ದೊಡ್ಡ ಕಾರ್ಖಾನೆಗಳು ಹಾಗೂ ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆಯೇ?’’ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.