ಅನಾಮಧೇಯ ದಾನಿಯಿಂದ ಮುಂಬೈ ಐಐಟಿಗೆ 160 ಕೋಟಿ ರೂಪಾಯಿ ದೇಣಿಗೆ!
Photo: shiksha.com
ಮುಂಬೈ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಬಾಂಬೆ ಇದೇ ಮೊದಲ ಬಾರಿಗೆ ಅನಾಮಧೇಯ ದಾನಿಯೊಬ್ಬರಿಂದ 160 ಕೋಟಿ ರೂಪಾಯಿಗಳ ದೇಣಿಗೆಯನ್ನು ಸ್ವೀಕರಿಸಿದೆ. ಚೆಕ್ ಮೂಲಕ ಈ ದೇಣಿಗೆ ನೀಡಲಾಗಿದ್ದು, ತಮ್ಮ ಕೊಡುಗೆ ಬಗ್ಗೆ ಸಂಪೂರ್ಣ ರಹಸ್ಯ ಕಾಪಾಡುವಂತೆ ಅವರು ಮನವಿ ಮಾಡಿದ್ದಾರೆ.
ಹುಂಡಿಗಳ ಮೂಲಕ ದೇವಾಲಯಗಳಿಗೆ ಭಕ್ತರಿಂದ ಉದಾರ ದೇಣಿಗೆ ಸ್ವೀಕರಿಸುವಂತೆ ಐಐಟಿಬಿ ನಿರ್ದೇಶಕ ಸುಭಾಶಿಶ್ ಚತುರ್ವೇದಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದರು. "ಇದೇ ಮೊದಲ ಬಾರಿಗೆ ನಮಗೆ ಅನಾಮಧೇಯ ದೇಣಿಗೆಯೊಂದು ಬಂದಿದೆ. ಇದು ಅಮೆರಿಕದಲ್ಲಿ ಸಾಮಾನ್ಯವಾದರೂ, ಅನಾಮಧೇಯವಗಿ ಇಷ್ಟೊಂದು ದೊಡ್ಡಮೊತ್ತದ ದೇಣಿಗೆಯನ್ನು ಖಾಸಗಿಯಾಗಿ ಭಾರತದ ಯಾವುದೇ ವಿಶ್ವವಿದ್ಯಾನಿಲಯ ಪಡೆಯುವುದು ಬಹುಶಃ ಇದೇ ಮೊದಲು. ಐಐಟಿಬಿಗೆ ದೇಣಿಗೆ ನೀಡಿದಾಗ ಅದು ಸಮರ್ಪಕವಾಗಿ ಹಾಗೂ ಒಳ್ಳೆಯ ಉದ್ದೇಶಕ್ಕೆ ಬಳಕೆಯಾಗುತ್ತದೆ ಎನ್ನುವ ವಿಶ್ವಾಸ ದಾನಿಗಳಲ್ಲಿದೆ" ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಅನುದಾನ ಕಡಿತವಾದ ಕಾರಣದಿಂದ ತನ್ನ ವಿಸ್ತರಣೆಗೆ ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿ (ಎಚ್ಇಎಫ್ಎ)ಯಿಂದ ಸಾಲ ಪಡೆಯುವ ಅನಿವಾರ್ಯತೆ ಸಂಸ್ಥೆಗೆ ಉದ್ಭವಿಸಿರುವ ಸಂದರ್ಭದಲ್ಲೇ ಈ ಕೊಡುಗೆ ಬಂದಿದೆ. ಕ್ಯಾಂಪಸ್ ನಲ್ಲಿ ಹಸಿರು ಇಂಧನ ಮತ್ತು ಸುಸ್ಥಿರ ಸಂಶೋಧನಾ ಕೇಂದ್ರ (ಜಿಇಎಸ್ಆರ್) ನಿರ್ಮಾಣಕ್ಕೆ ಈ ದೇಣಿಗೆಯನ್ನು ಬಳಸಲಾಗುವುದು. ಇದರ ಒಂದು ಭಾಗವನ್ನು ಹೊಸ ಮೂಲಸೌಕರ್ಯಗಳಿಗೆ ಬಳಸಿದರೆ, ದೊಡ್ಡ ಮೊತ್ತವನ್ನು ಸಂಶೋಧನೆಗಾಗಿಯೇ ಕಾಯ್ದಿರಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಜಿಇಎಸ್ಆರ್ ಹಬ್ನಲ್ಲಿ ಬ್ಯಾಟರಿ ತಂತ್ರಜ್ಞಾನ, ಸೌರ ಫೋಟೊವೋಲ್ಟೈಕ್ಸ್, ಜೈವಿಕ ಇಂಧನ, ಸ್ವಚ್ಛ-ಗಾಳಿಯ ವಿಜ್ಞಾನ, ಪ್ರವಾಹ ಮುನ್ಸೂಚನೆ ಮತ್ತು ಇಂಗಾಲದ ಸೆರೆಹಿಡಿಯುವಿಕೆ ಕ್ಷೇತ್ರಗಳ ಸಂಶೋಧನೆಗಳಿಗೆ ಬಳಸಲು ಉದ್ದೇಶಿಸಲಾಗಿದೆ.