17 ಮಕ್ಕಳಿಗೆ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ಪ್ರದಾನ

PC : PTI
ಹೊಸದಿಲ್ಲಿ: ಹೊಸದಿಲ್ಲಿಯ ರಾಷ್ಟ್ರಪತಿ ಭವನದ ಕಲ್ಚರಲ್ ಸೆಂಟರ್ನಲ್ಲಿ ಗುರುವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 17 ಮಕ್ಕಳಿಗೆ ಪ್ರತಿಷ್ಠಿತ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ನೀಡಿ ಗೌರವಿಸಿದರು.
ಕಲೆ, ಸಂಸ್ಕೃತಿ, ಶೌರ್ಯ, ನಾವಿನ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ, ಕ್ರೀಡೆ ಹಾಗೂ ಪರಿಸರ ಎಂಬ ಏಳು ವಿಭಾಗಗಳಲ್ಲಿ ಮಕ್ಕಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ ದ್ರೌಪದಿ ಮುರ್ಮು, ಇಡೀ ದೇಶ ಹಾಗೂ ಸಮಾಜ ಈ ಮಕ್ಕಳ ಬಗ್ಗೆ ಹೆಮ್ಮೆ ಪಡುತ್ತದೆ ಎಂದರು.
ವಿಶೇಷ ಕೆಲಸ ಹಾಗೂ ಸಾಧನೆಗಳಿಗಾಗಿ ಅವರು ಮಕ್ಕಳನ್ನು ಗುರುತಿಸಿದರು. ಅಲ್ಲದೆ, ಈ ಮಕ್ಕಳು ಅಪರಿಮಿತ ಸಾಮರ್ಥ್ಯವನ್ನು, ದೇಶದ ಇತರ ಮಕ್ಕಳಿಗೆ ಮಾದರಿಯಾಗುವ ಹೋಲಿಸಲಾಗದ ಗುಣಗಳನ್ನು ಹೊಂದಿದ್ದಾರೆ ಎಂದು ಹೇಳಿದರು.
ಭಾರತ ತನ್ನ ಸ್ವಾತಂತ್ರ್ಯ ಶತಮಾನೋತ್ಸವನ್ನು 2047ರಲ್ಲಿ ಆಚರಿಸಿಕೊಳ್ಳುವಾಗ ಈ ಪ್ರಶಸ್ತಿ ವಿಜೇತ ಮಕ್ಕಳು ದೇಶದ ಪ್ರಭುದ್ದ ನಾಗರಿಕರಾಗಿತ್ತಾರೆ. ಪ್ರತಿಭಾವಂತ ಬಾಲಕರು ಹಾಗೂ ಬಾಲಕಿಯರು ಅಭಿವೃದ್ಧಿ ಭಾರತದ ನಿರ್ಮಾತೃರಾಗುತ್ತಾರೆ ಎಂದು ಮುರ್ಮು ಅವರು ಹೇಳಿದರು.
ಮಕ್ಕಳಿಗೆ ಅವಕಾಶಗಳನ್ನು ನೀಡುವುದು ಹಾಗೂ ಅವರ ಪ್ರತಿಭೆಯನ್ನು ಗುರುತಿಸುವುದು ಭಾರತದ ಸಂಪ್ರದಾಯದ ಭಾಗವಾಗಿದೆ. ಈ ಸಂಪ್ರದಾಯವನ್ನು ಇನ್ನಷ್ಟು ಬಲಗೊಳಿಸಬೇಕು ಎಂದು ಅವರು ಒತ್ತಿ ಹೇಳಿದರು.
ದ್ರೌಪದಿ ಮುರ್ಮು ಅವರು ತಮ್ಮ ಭಾಷಣದಲ್ಲಿ ಪ್ಲೇಸ್ಕೂಲ್ನ ಹಾಗೂ ನರ್ಸರಿ ಪ್ರಾಯ ಗುಂಪಿನಲ್ಲಿ ಬರುವ ಅತ್ಯಂತ ಕಿರಿಯ ಪ್ರಶಸ್ತಿ ಪುರಸ್ಕೃತ ಕೋಲ್ಕತ್ತಾದ ಅನೀಶ್ ಸರ್ಕಾರ್ನ ಸಾಧನೆಯನ್ನು ಪ್ರಶಂಶಿಸಿದರು. ಅನೀಶ್ ತಮ್ಮ ಸಾಧನೆಯಿಂದ ಜಗತ್ತಿನ ಅತಿ ಕಿರಿಯ ಪ್ರಶಸ್ತಿ ವಿಜೇತರಾಗಿದ್ದಾರೆ ಎಂದು ಅವರು ಹೇಳಿದರು.
ಇದಲ್ಲದೆ ಮುರ್ಮು ಅವರು ಪೋಷಕರು ನಿಧನರಾದ ಬಳಿಕ ಎಲ್ಲಾ ಸವಾಲುಗಳನ್ನು ಎದುರಿಸಿದ 15 ವರ್ಷದ ಹೆಂಬತಿ ನಾಗ್ ಅವರ ಪ್ರಯತ್ನವನ್ನು ಕೂಡ ಪ್ರಶಂಸಿಸಿದರು. ಹೆಂಬತಿ ನಾಗ್ ಚತ್ತೀಸ್ಗಢ ನಕ್ಸಲ್ ಪ್ರಭಾವಿತ ಪ್ರದೇಶದಿಂದ ಬಂದ ಬಾಲಕಿ. ಎಲ್ಲಾ ಸವಾಲುಗಳ ನಡುವೆಯೂ ಪರಿಶ್ರಮ, ಧೈರ್ಯ, ಕೌಶಲದ ಬಲದಿಂದ ಹೆಂಬತಿ ನಾಗ್ ಜುಡೋದಲ್ಲಿ ರಾಷ್ಟ್ರಮಟ್ಟದಲ್ಲಿ ತನ್ನ ಛಾಪು ಮೂಡಿಸಿದ್ದಾರೆ ಎಂದು ದ್ರೌಪದಿ ಮುರ್ಮು ಹೇಳಿದರು.