ಇಂದಿನಿಂದ 19 ಕೆಜಿ ಎಲ್ಪಿಜಿ ವಾಣಿಜ್ಯ ಬಳಕೆಯ ಸಿಲಿಂಡರ್ ದುಬಾರಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ : ತೈಲ ಕಂಪನಿಗಳು ಬೆಲೆ ಏರಿಕೆಯನ್ನು ಘೋಷಿಸಿದ ನಂತರ ಮೆಟ್ರೋ ನಗರಗಳಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಶುಕ್ರವಾರದಿಂದ ಹೆಚ್ಚಾಗಿದೆ.
ದಿಲ್ಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ದರವನ್ನು ನವೆಂಬರ್ 1 ರಿಂದ 62 ರೂ.ಗಳಷ್ಟು ಹೆಚ್ಚಿಸಲಾಗಿದ್ದು, ಅದರಂತೆ ಸಿಲಿಂಡರ್ ಬೆಲೆಯು 1,740 ರೂ.ನಿಂದ 1,802 ರೂ.ಗೆ ಏರಿಕೆಯಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ.
ಆಗಸ್ಟ್ನಲ್ಲಿ ತೈಲ ಕಂಪನಿಗಳು 8.50 ರೂ.ಗಳ ಹೆಚ್ಚಳವನ್ನು ಘೋಷಿಸಿದ್ದವು. ಸೆಪ್ಟೆಂಬರ್ ನಲ್ಲಿ, 19 ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆಯನ್ನು 39 ರೂ ಹೆಚ್ಚಿಸಲಾಗಿತ್ತು. ಅಕ್ಟೋಬರ್ 1 ರಂದು, ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ LPG ಗ್ಯಾಸ್ ಸಿಲಿಂಡರ್ ದರವನ್ನು 48.50 ರೂ ಹೆಚ್ಚಿಸಿದ್ದವು. ಆಗ ದಿಲ್ಲಿಯಲ್ಲಿ ಸಿಲಿಂಡರ್ ಬೆಲೆಯು 1,740 ರೂ. ತಲುಪಿತ್ತು. ಇದು 19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ನ ಬೆಲೆಯಲ್ಲಿ ಸತತ ನಾಲ್ಕನೇ ತಿಂಗಳ ಏರಿಕೆಯಾಗಿದೆ.
ದಿಲ್ಲಿ ಹೊರತಾಗಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ನ ಬೆಲೆಯೂ ಹೆಚ್ಚಾಗಿದೆ. ಇಂದಿನ ಈ ಏರಿಕೆಯೊಂದಿಗೆ ಎಲ್ ಪಿ ಜಿ ದರಗಳು ಮುಂಬೈನಲ್ಲಿ 1,754.50 ರೂ., ಚೆನ್ನೈನಲ್ಲಿ 1,964.50 ರೂ.ಮತ್ತು ಕೋಲ್ಕತ್ತಾದಲ್ಲಿ 1,911.50 ರೂ. ಆಗಿದೆ.