7 ಲಕ್ಷ ಮುಸ್ಲಿಮರ ಸಹಿತ 19 ಲಕ್ಷ ಮಂದಿ NRCಯಿಂದ ಹೊರಕ್ಕೆ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ
ಹಿಮಂತ ಬಿಸ್ವ ಶರ್ಮ | Photo: @CMOfficeAssam / Twitter
ಗುವಾಹಟಿ: ರಾಷ್ಟ್ರೀಯ ನಾಗರಿಕರ ದಾಖಲೆ (NRC)ಯಿಂದ ರಾಜ್ಯದಲ್ಲಿನ 7 ಲಕ್ಷ ಮುಸ್ಲಿಮರ ಸಹಿತ 19 ಲಕ್ಷ ಮಂದಿಯನ್ನು ಕೈಬಿಡಲಾಗಿದೆ ಎಂದು ರವಿವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ತಿಳಿಸಿದ್ದಾರೆ.
News Live ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಹಿಮಂತ ಬಿಸ್ವ ಶರ್ಮ, “ಐದು ಲಕ್ಷ ಬಂಗಾಳಿ ಹಿಂದೂಗಳು, ಕೋಚ್-ರಾಜ್ಬೊಂಗ್ಷಿ, ದಾಸ್, ಕಲಿಟ, ಶರ್ಮ ಗುಂಪುಗಳು ಸೇರಿದಂತೆ ಎರಡು ಲಕ್ಷ ಹಿಂದೂ ಗುಂಪುಗಳು, 1.5 ಲಕ್ಷ ಗೂರ್ಖಾಗಳನ್ನು ದಾಖಲೆಯಿಂದ ಕೈಬಿಡಲಾಗಿದೆ” ಎಂದು ಹೇಳಿದ್ದಾರೆ.
ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ, ಅವರನ್ನು ಗಡೀಪಾರು ಮಾಡಲು ರಾಷ್ಟ್ರೀಯ ನಾಗರಿಕರ ದಾಖಲೆಯನ್ನು ಜಾರಿಗೆ ತರಲಾಗಿದೆ. ಆಗಸ್ಟ್ 31, 2019ರಂದು ಅಸ್ಸಾಂ ರಾಜ್ಯವು ರಾಷ್ಟ್ರೀಯ ನಾಗರಿಕರ ದಾಖಲೆಯನ್ನು ಪ್ರಕಟಿಸಿದೆ. ಅಸ್ಸಾಂ ನಿವಾಸಿಗಳು ತಾವು ಅಥವಾ ತಮ್ಮ ಪೂರ್ವಜರು ಮಾರ್ಚ್ 24, 1971ಕ್ಕೂ ಮುಂಚೆ ಅಸ್ಸಾಂ ರಾಜ್ಯ ಪ್ರವೇಶಿಸಿರುವುದನ್ನು ಸಾಬೀತು ಮಾಡಬೇಕಿದೆ. ಇದಾದ ನಂತರ ಅವರನ್ನು ರಾಷ್ಟ್ರೀಯ ನಾಗರಿಕರ ದಾಖಲೆ ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತದೆ.
ರಾಷ್ಟ್ರೀಯ ನಾಗರಿಕರ ದಾಖಲೆಗೆ ಸೇರ್ಪಡೆಯಾಗಲು ಅರ್ಜಿ ಸಲ್ಲಿಸಿದ್ದವರ ಪೈಕಿ 19 ಲಕ್ಷ ಮಂದಿ, ಅರ್ಥಾತ್ ಶೇ. 5.77ರಷ್ಟು ಮಂದಿಯನ್ನು ಅಂತಿಮ ಪಟ್ಟಿಯಿಂದ ಕೈಬಿಡಲಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಒದಗಿಸಿರುವ ಅಂಕಿ ಸಂಖ್ಯೆಯ ಪ್ರಕಾರ, ಈ ಮೊತ್ತವು 15.5 ಲಕ್ಷ ಆಗಲಿದೆ. ಉಳಿದ 3.5 ಲಕ್ಷ ಮಂದಿ ಯಾರು ಎಂಬುದು ಇನ್ನೂ ಅಸ್ಪಷ್ಟವಾಗಿದೆ.