1990ರ ವಾಯುಪಡೆ ಸಿಬ್ಬಂದಿಗಳ ಮೇಲೆ ದಾಳಿ ಪ್ರಕರಣ ; ಯಾಸಿನ್ ಮಲಿಕ್ ಶೂಟರ್ ಎಂದು ಗುರುತಿಸಿದ ಪ್ರತ್ಯಕ್ಷದರ್ಶಿ
ಯಾಸಿನ್ ಮಲಿಕ್ | Photo: thehindu.com
ಹೊಸದಿಲ್ಲಿ, : ಭಾರತೀಯ ವಾಯುಪಡೆ (ಐಎಎಫ್)ಯ ಮಾಜಿ ಸಿಬ್ಬಂದಿ ಹಾಗೂ ಪ್ರಾಸಿಕ್ಯೂಷನ್ ಪರ ನಿರ್ಣಾಯಕ ಪ್ರತ್ಯಕ್ಷದರ್ಶಿ ರಾಜ್ವಾರ್ ಉಮೇಶ್ವರ ಸಿಂಗ್ ಅವರು ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ 1990ರಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿ ನಾಲ್ವರು ಐಎಎಫ್ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿಯನ್ನು ನಡೆಸಿ ಕೊಂದಿದ್ದ ಮುಖ್ಯ ಶೂಟರ್ ಎಂದು ಗುರುತಿಸಿದ್ದಾರೆ.
1990ರ ಜ.25ರಂದು ಶ್ರೀನಗರದ ಹೊರವಲಯದ ರಾವಲ್ಪೋರಾದಲ್ಲಿ ಮಲಿಕ್ ನಡೆಸಿದ್ದ ದಾಳಿಯಲ್ಲಿ ಐಎಎಫ್ ಅಧಿಕಾರಿ ಮತ್ತು ಇತರ ಮೂವರು ಕೊಲ್ಲಲ್ಪಟ್ಟಿದ್ದರು.
2018 ರಿಂದ ಬಂಧನದಲ್ಲಿರುವ ದಿಲ್ಲಿಯ ತಿಹಾರ್ ಜೈಲಿನಿಂದ ವರ್ಚುವಲ್ ಮೂಲಕ ಶ್ರೀನಗರದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಮಲಿಕ್ ಉಪಸ್ಥಿತಿಯ ಸಂದರ್ಭ ರಾಜ್ವಾರ್ ಉಮೇಶ್ವರ ಸಿಂಗ್ ಆರೋಪಿಯನ್ನು ಗುರುತಿಸಿದರು.
1990, ಜ.5ರಂದು ಆಗ ಭಯೋತ್ಪಾದಕ ಸಂಘಟನೆ ಜೆಕೆಎಲ್ಎಫ್ ನಾಯಕ ಮಲಿಕ್ ನೇತೃತ್ವದ ಉಗ್ರರ ಗುಂಪು ಐಎಎಫ್ ಸಿಬ್ಬಂದಿಗಳ ಮೇಲೆ ನಡೆಸಿದ್ದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟು, ಇತರ 22 ಜನರು ಗಾಯಗೊಂಡಿದ್ದರು.
1990ರಲ್ಲಿ ಮಲಿಕ್ ಬಂಧನವನ್ನು ನಡೆಸಿದ್ದ ಸಿಬಿಐ ಅದೇ ವರ್ಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು,ಆದರೆ ವಿಚಾರಣೆ ಆಮೆಗತಿಯಲ್ಲಿ ಸಾಗಿತ್ತು.
1994ರಲ್ಲಿ ಮಲಿಕ್ ಬಿಡುಗಡೆಗೊಂಡಿದ್ದು, 1995ರಲ್ಲಿ ಉಚ್ಚ ನ್ಯಾಯಾಲಯವು ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿತ್ತು. ಬಿಡುಗಡೆಯ ಬಳಿಕ ಜೆಕೆಎಲ್ಎಫ್ ವಿಭಜನೆಗೊಂಡಿದ್ದು, ಅಹಿಂಸಾತ್ಮಕ ಪ್ರತ್ಯೇಕತಾವಾದಿ ಬಣದ ನೇತೃತ್ವವನ್ನು ಮಲಿಕ್ ವಹಿಸಿದ್ದರೆ, ಹಿಂಸಾತ್ಮಕ ಬಣದ ನೇತೃತ್ವವನ್ನು ಸ್ಥಾಪಕ ಅಮಾನುಲ್ಲಾ ಖಾನ್ ಮುಂದುವರಿಸಿದ್ದ.
1989ರಲ್ಲಿ ಆಗಿನ ಕೇಂದ್ರ ಗೃಹಸಚಿವ ಮಫ್ತಿ ಮುಹಮ್ಮದ್ ಸಯೀದ್ ಪುತ್ರಿ ರುಬೈಯಾ ಸಯೀದ್ ಅಪಹರಣ ಪ್ರಕರಣದಲ್ಲಿ ಮಲಿಕ್ ಆರೋಪಿಯಾಗಿದ್ದು, 2019 ಎಪ್ರಿಲ್ನಲ್ಲಿ ಭಯೋತ್ಪಾದನೆಗೆ ಆರ್ಥಿಕ ನೆರವು ಆರೋಪದಲ್ಲಿ ಎನ್ಐಎ ಮಲಿಕ್ ನನ್ನು ಬಂಧಿಸಿತ್ತು. ಇದಕ್ಕೂ ಮುನ್ನ ಮಾರ್ಚ್ ನಲ್ಲಿ ಕೇಂದ್ರವು ಮಲಿಕ್ ನೇತೃತ್ವದ ಗುಂಪನ್ನು ನಿಷೇಧಿಸಿತ್ತು.