ದಿಲ್ಲಿ | ಕೊಳಚೆ ಗುಂಡಿ ಶುಚಿಗೊಳಿಸುವಾಗ ಇಬ್ಬರು ಕಾರ್ಮಿಕರು ಮೃತ್ಯು

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಕೊಳಚೆ ಗುಂಡಿಯನ್ನು ಶುಚಿಗೊಳಿಸುವಾಗ ಇಬ್ಬರು ನೈರ್ಮಲ್ಯ ಕಾರ್ಮಿಕರು ಮೃತಪಟ್ಟು, ಓರ್ವ ಗಾಯಗೊಂಡಿರುವ ಘಟನೆ ಶುಕ್ರವಾರ ಹೊರ ಉತ್ತರ ದಿಲ್ಲಿಯ ನರೇಲಾ ಪ್ರದೇಶದಲ್ಲಿ ನಡೆದಿದೆ. ಕೊಳಚೆ ಗುಂಡಿಯಲ್ಲಿನ ವಿಷಪೂರಿತ ಅನಿಲವನ್ನು ಸೇವಿಸಿ ಅವರೆಲ್ಲ ಪ್ರಜ್ಞಾಹೀನರಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತರನ್ನು ವಿಜಯ್ ಮೋಚಿ (36), ನಂದು (44) ಎಂದು ಗುರುತಿಸಲಾಗಿದೆ. ಮಾನಸಾ ದೇವಿ ಅಪಾರ್ಟ್ ಮೆಂಟ್ ಬಳಿಯ ಕೊಳಚೆ ಗುಂಡಿಯನ್ನು ಶುಚಿಗೊಳಿಸುವಾಗ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಳಚೆ ಗುಂಡಿಯೊಳಗಿದ್ದ ಮೃತರನ್ನು ಪರೀಕ್ಷಿಸಲು ಅದರೊಳಗಿಳಿದಿದ್ದ ಮೂರನೆ ಕಾರ್ಮಿಕ ಅನಿಲ್ ಕುಮಾರ್ ಕೂಡಾ ಪ್ರಜ್ಞಾಹೀನನಾಗಿ ಕುಸಿದು ಬಿದ್ದಿದ್ದಾನೆ ಎಂದು ಅವರು ಹೇಳಿದ್ದಾರೆ.
ತಕ್ಷಣವೇ ಉಳಿದ ಕಾರ್ಮಿಕರು ಅಗ್ನಿಶಾಮಕ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದು, ಪ್ರಜ್ಞಾಹೀನರಾಗಿದ್ದ ಅವರನ್ನೆಲ್ಲ ಸಮೀಪದ ಆಸ್ಪತ್ರೆಯೊಂದಕ್ಕೆ ಸಾಗಿಸಿದ್ದಾರೆ. ಆದರೆ, ವಿಜಯ್ ಹಾಗೂ ನಂದು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಮತ್ತೊಬ್ಬ ಕಾರ್ಮಿಕ ಅನಿಲ್ ಕುಮಾರ್ ಚೇತರಿಸಿಕೊಳ್ಳುತ್ತಿದ್ದಾರೆ.