ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿರುವ ನೂತನ ಶಸ್ತ್ರಾಸ್ತ್ರಗಳೇನೇನು?
PC : NDTV
ಹೊಸದಿಲ್ಲಿ: ದೇಶೀಯವಾಗಿ ಅಭಿವೃದ್ಧಿಪಡಿಸಿ, ಉತ್ಪಾದಿಸಲಾಗಿರುವ ಎರಡು ಯುದ್ಧ ನೌಕೆಗಳು ಹಾಗೂ ಉತ್ಕೃಷ್ಟ ದರ್ಜೆಯ ಕ್ಷಿಪಣಿ ನಾಶಕ ದಾಳಿ ಜಲಾಂತರ್ಗಾಮಿಯೊಂದು ಬುಧವಾರ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳುವ ಮೂಲಕ ಇತಿಹಾಸ ನಿರ್ಮಾಣವಾಗಿದೆ.
ಇದೇ ಪ್ರಪ್ರಥಮ ಬಾರಿಗೆ ಭಾರತದಲ್ಲೇ ನಿರ್ಮಾಣಗೊಂಡಿರುವ ಎರಡು ಯುದ್ಧ ನೌಕೆಗಳು ಒಂದೇ ಬಾರಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದ್ದು, ಆ ಮೂಲಕ ಭಾರತವು ಸೇನಾ ಸ್ವಾವಲಂಬನೆ ಸಾಧಿಸಿದಂತಾಗಿದೆ.
ಹಿಂದೂ ಮಹಾಸಾಗರ ಪ್ರಾಂತ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಚೀನಾಗೆ ಹಾಗೂ ಚೀನಾ ನೆರವಿನಿಂದ 50 ಯುದ್ಧ ನೌಕೆಗಳ ಸೇನೆಯನ್ನು ನಿರ್ಮಿಸುವ ಪಾಕಿಸ್ತಾನದ ಯೋಜನೆಗೆ ಇದು ಭಾರತದ ತಕ್ಕ ತಿರುಗೇಟು ಎಂದೂ ವ್ಯಾಖ್ಯಾನಿಸಲಾಗುತ್ತಿದೆ.
ಇಷ್ಟು ಮಾತ್ರವಲ್ಲದೆ, ಸೋವಿಯತ್ ಯುಗದ ಬಹುತೇಕ ಶಸ್ತ್ರಾಸ್ತ್ರಗಳನ್ನು ಬದಲಿಸುವ ನಿಟ್ಟಿನಲ್ಲಿ ಇದನ್ನೊಂದು ಮಹತ್ವದ ಹೆಜ್ಜೆ ಎಂದೇ ಪರಿಗಣಿಸಲಾಗಿದೆ. ಸ್ವದೇಶಿ ರಕ್ಷಣಾ ಉತ್ಪಾದನೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಕಳೆದ ವರ್ಷ ಬೃಹತ್ 1.5 ಬಿಲಿಯನ್ ಡಾಲರ್ ಮೊತ್ತವನ್ನು ವಿನಿಯೋಗಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಸರಕಾರದ ಪ್ರಕಾರ, ಶೇ. 75ರಷ್ಟು ಯುದ್ಧ ನೌಕೆಗಳನ್ನು ಸ್ವದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ.
“ಭಾರತವೀಗ ಪ್ರಮುಖ ನೌಕಾ ಬಲವಾಗಿ ರೂಪುಗೊಳ್ಳುತ್ತಿದೆ. ಮೂರು ಯುದ್ಧ ನೌಕೆಗಳನ್ನು ಭಾರತೀಯ ನೌಕಾಪಡೆಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಜಾಗತಿಕ ನಾಯಕನಾಗುವ ಹಾಗೂ ಸ್ವಾವಲಂಬನೆ ಸಾಧಿಸುವ ದಿಕ್ಕಿನಲ್ಲಿ ನಮ್ಮ ಪ್ರಯತ್ನಗಳು ಮತ್ತಷ್ಟು ಪ್ರಬಲಗೊಳ್ಳಲಿವೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದೇ ವೇಳೆ, “ಶತಮಾನಗಳ ಕಾಲ ಭಾರತೀಯ ನೌಕಾಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿಡಲು ನಾವು ಬಹು ದೊಡ್ಡ ಕ್ರಮಗಳನ್ನು ಕೈಗೊಂಡಿದ್ದೇವೆ” ಎಂದೂ ಅವರು ಹೇಳಿದ್ದಾರೆ.
ಐಎನ್ಎಸ್ ಸೂರತ್, ಐಎನ್ಎಸ್ ವಾಘ್ ಶೀರ್ ಅನ್ನು ಇಂದು ಭಾರತೀಯ ನೌಕಾಪಡೆಗೆ ಸೇರ್ಪಡೆ ಮಾಡಲಾಯಿತು.