ಗುರುತು ಚೀಟಿ ಪುರಾವೆ ಇಲ್ಲದೆ 2000 ರೂ. ನೋಟು ವಿನಿಮಯ ವಿರುದ್ಧದ ಮನವಿ ಸುಪ್ರೀಂನಿಂದ ತಿರಸ್ಕೃತ
ಸಾಂದರ್ಭಿಕ ಚಿತ್ರ | Photo : PTI
ಹೊಸದಿಲ್ಲಿ: ಯಾವುದೇ ಮನವಿ ಪತ್ರ ಮತ್ತು ಗುರುತಿನ ಚೀಟಿ ಪುರಾವೆ ಇಲ್ಲದೆ 2,000 ಕರೆನ್ಸಿ ನೋಟುಗಳನ್ನು ವಿನಿಮಯ ಮಾಡಲು ಅವಕಾಶ ನೀಡಿದ ಆರ್ಬಿಐ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಹಾಗೂ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರನ್ನು ಒಳಗೊಂಡ ನ್ಯಾಯಪೀಠ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿತು.
2000 ನೋಟು ವಿನಿಮಯಕ್ಕೆ ಅವಕಾಶ ನೀಡುವ ವಿಷಯ ಆಡಳಿತದ ನೀತಿ ನಿರ್ಧಾರಕ್ಕೆ ಸಂಬಂಧಿಸಿದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಹಿಂದೆ ನ್ಯಾಯವಾದಿ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಉಚ್ಚ ನ್ಯಾಯಾಲಯ ತಿರಸ್ಕರಿಸಿತ್ತು. ಉಪಾಧ್ಯಾಯ ಅವರು ತನ್ನ ಮನವಿಯಲ್ಲಿ ಗುರುತು ಚೀಟಿ ಪುರಾವೆ ಇಲ್ಲದೆ 2,000 ನೋಟನ್ನು ವಿನಿಮಯ ಮಾಡಲು ಅವಕಾಶ ನೀಡುವ ಆರ್ಬಿಐ ಹಾಗೂ ಎಸ್ಬಿಐ ಅಧಿಸೂಚನೆ ನಿರಂಕುಶವಾದುದು ಹಾಗೂ ಭ್ರಷ್ಟಾಚಾರ ನಿಗ್ರಹಿಸಲು ಜಾರಿಗೊಳಿಸಲಾದ ಕಾನೂನಿಗೆ ವಿರುದ್ಧವಾದದು ಎಂದು ಪ್ರತಿಪಾದಿಸಿದ್ದರು.
ಇದಕ್ಕೆ ಉಚ್ಚ ನ್ಯಾಯಾಲಯ ಸರಕಾರದ ನಿರ್ಧಾರ ಹಟಮಾರಿ ಅಥವಾ ನಿರಂಕುಶ ಅಥವಾ ಅದು ಕಪ್ಪು ಹಣ, ಹಣ ಅಕ್ರಮ ವರ್ಗಾವಣೆ, ಲಾಭಕೋರತನಕ್ಕೆ ಪ್ರೋತ್ಸಾಹ ನೀಡುತ್ತದೆ ಅಥವಾ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿತ್ತು.
ಈ ಹಿನ್ನೆಲೆಯಲ್ಲಿ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.